ಕಿಡಿಗೇಡಿಗಳ ಕುಕೃತ್ಯಕ್ಕೆ ಸುಟ್ಟು ಭಸ್ಮವಾಯಿತೇ ಮನೆ ಮುಂದೆ ಪಾರ್ಕ್ ಮಾಡಿದ್ದ ಕಾರು? ಘಟನೆ ನಡೆದಿದ್ದು ನೆಲಮಂಗಲನಲ್ಲಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 30, 2021 | 9:23 PM

ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನ ಪ್ರಕಾರ ಯಾರೋ ಕಿಡಿಗೇಡಿಗಳು ಕಾರಿಗೆ ಕೊಳ್ಳಿಯಿಟ್ಟಿದ್ದಾರೆ.

ಮೊನೆಯಷ್ಟೇ ನಾವು ನಿಮಗೆ ಕಾರು ಹೊತ್ತಿ ಉರಿದ ಮತ್ತು ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕೆಲಸ ಶುರು ಮಾಡುತ್ತಿದ್ದಂತೆ ಕಾರು ಸ್ಫೋಟಗೊಂಡ ವಿಡಿಯೋವನ್ನು ತೋರಿಸಿದ್ದೆವು. ಈಗ ಮತ್ತೊಮ್ಮೊ ನಮಗೆ ಹೊತ್ತಿ ಉರಿಯುತ್ತಿರುವ ಕಾರೊಂದರ ವಿಡಿಯೋ ಸಿಕ್ಕಿದೆ. ಕಳೆದ ರಾತ್ರಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನಲ್ಲಿ ಈ ಘಟನೆ ನಡೆದಿದೆ. ಪಟ್ಟಣದ ಪೇಟೆ ಬೀದಿಯಲ್ಲಿರುವ ಹಿಪ್ಪೆ ಆಂಜನೇಯ ಬಡಾವಣೆಯ ನಿವಾಸಿಯಾಗಿರುವ ನಂದೀಶ್ ಅವರಿಗೆ ಸೇರಿದ ಮಹೀಂದ್ರ ಎಕ್ಸ್ ಯು ವಿ 500 ಕಾರಿದು.

ವಿಡಿಯೋ ನೋಡಿದರೆ ಘಟನೆ ರಾತ್ರಿ ಸಮಯದಲ್ಲಿ ನಡೆದಿರುವುದು ಅಂತ ಗೊತ್ತಾಗುತ್ತದೆ. ಪೇಟೆ ಬೀದಿಯ ದಾರಿದೀಪಗಳು ಉರಿಯುತ್ತಿವೆ ಮತ್ತು ಸ್ಥಳಕ್ಕೆ ಆಗಮಿಸಿರುವ ಅಗ್ನಿಶಾಮಕ ದಳದ ಸಿಬ್ಬಂದಿ ಕಾರನ್ನು ಸುಟ್ಟು ಭಸ್ಮ ಮಾಡುತ್ತಿರುವ ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿದ್ದಾರೆ. ಅವರು ಬೆಂಕಿಯನ್ನು ನಂದಿಸುತ್ತಾರಾದರೂ ಕಾರು ಸಂಪೂರ್ಣವಾಗಿ ಸುಟ್ಟುಹೋಗಿದೆ.

ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನ ಪ್ರಕಾರ ಯಾರೋ ಕಿಡಿಗೇಡಿಗಳು ಕಾರಿಗೆ ಕೊಳ್ಳಿಯಿಟ್ಟಿದ್ದಾರೆ. ಅದು ನಿಜವೇ ಆದಲ್ಲಿ ಅಕ್ಕಪಕ್ಕದ ಮನೆಗಳ ಇಲ್ಲವೇ ಖುದ್ದು ನಂದೀಶ್ ಅವರೇ ಮನೆ ಮುಂದೆ ಕೆಮೆರಾಗಳನ್ನು ಅಳವಡಿಸಿದ್ದರೆ ಅದರಲ್ಲಿ ಅ ದೃಶ್ಯ ಅಂದರೆ, ಕಿಡಿಗೇಡಿಗಳು ಕಾರಿಗೆ ಬೆಂಕಿಯಿಡುವ ಕೃತ್ಯ ಸೆರೆಯಾಗಿರುತ್ತದೆ ಮತ್ತು ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಬಂಧಿಸಲು ಪೊಲೀಸರಿಗೆ ಸಹಾಯವಾಗುತ್ತದೆ.

ಇದನ್ನೂ ಓದಿ:   ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ ಪುನೀತ್ ರಾಜ್​ಕುಮಾರ್​; ಇಲ್ಲಿದೆ ವಿಡಿಯೋ