ಮೈಸೂರು-ಕೊಡಗು ಕ್ಷೇತ್ರಕ್ಕೆ ಪ್ರತಾಪ್ ಸಿಂಹನ ಕೊಡುಗೆ ಏನೂ ಇಲ್ಲ: ಕೆ ವೆಂಕಟೇಶ್, ಪಶು ಸಂಗೋಪನೆ ಸಚಿವ

|

Updated on: Jan 02, 2024 | 10:43 AM

ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನ ಕುಟುಂಬವನ್ನು ಮುಗಿಸಲು ಹೊರಟಿದ್ದಾರೆ ಎಂದು ಪ್ರತಾಪ್ ಹೇಳುತ್ತಿರೋದು ಹಾಸ್ಯಾಸ್ಪದ ಎಂದು ಸಚಿವ ಕೆ ವೆಂಕಟೇಶ್ ಹೇಳುತ್ತಾರೆ. ಸಿದ್ದರಾಮಯ್ಯ ಲೋಕಸಭಾ ಚುನಾವಣೆಯಲ್ಲಿ ತಮ್ಮ ಮಗ ಕೊಡಗು-ಮೈಸೂರು ಕ್ಷೇತ್ರದ ಅಭ್ಯರ್ಥಿ ಅಂತ ಯಾವತ್ತೂ ಹೇಳಿಲ್ಲ ಮತ್ತು ಪ್ರತಾಪ್ ಸಿಂಹನ ಕುಟುಂಬವನ್ನು ಮುಗಿಸಲು ಅವರು ರಾಜಮನೆತನದವರೂ ಅಲ್ಲ ಎಂದು ವೆಂಕಟೇಶ್ ಹೇಳಿದರು.

ಚಾಮರಾಜನಗರ: ಮಂಗಳವಾರ ಬೆಳಗ್ಗೆ ನಗರದಲ್ಲಿ ಪತ್ರಿಕಾ ಗೋಷ್ಟಿ ನಡೆಸಿ ಮಾತಾಡಿದ ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ ವೆಂಕಟೇಶ್ (K Venkatesh), ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ (Pratap Simha) ಮೇಲೆ ಮುಗಿಬಿದ್ದರು. ಡಿಸೆಂಬರ್ ತಿಂಗಳು ಶುರುವಾದ ಬಳಿಕ ಸಂಸದನಿಗೆ ಶನಿಕಾಟ ಶುರುವಾದಂತಿದೆ. ಸಂಸತ್ ಭವನಕ್ಕೆ (Parliament House) ಬಣ್ಣದ ಹೊಗೆಯುಗುಳುವ ಕ್ಯಾನಿಸ್ಟರ್ ಗಳನ್ನು ನುಗ್ಗಿದ ಯುವಕರ ಬಳಿ ಪ್ರತಾಪ್ ಸಿಂಹ ಹೆಸರಲ್ಲಿ ನೀಡಿದ ಪಾಸುಗಳಿದ್ದವು. ಅದಾದ ಮೇಲೆ ಅವರ ಸಹೋದರ ವಿಕ್ರಮ ಸಿಂಹನನ್ನು ಕಾಡಿನ ಮರಗಳನ್ನು ಕಡಿದ ಆರೋಪದಲ್ಲಿ ಬಂಧಿಸಲಾಯಿತು. ಈ ಹಿನ್ನೆಲೆಯಲ್ಲೇ ಕಾಂಗ್ರೆಸ್ ನಾಯಕರ ಟೀಕೆಗೆ ಅವರು ಗುರಿಯಾಗುತ್ತಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನಾಮಬಲದಿಂದ ಮೈಸೂರು-ಕೊಡಗು ಕ್ಷೇತ್ರದಿಂದ ಎರಡು ಬಾರಿ ಲೋಕ ಸಭೆಗೆ ಆಯ್ಕೆಯಾಗಿರುವ ಪ್ರತಾಪ್ ಸಿಂಹ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಶೂನ್ಯ ಎಂದು ವೆಂಕಟೇಶ್ ಹೇಳಿದರು. ತಾವು ಪ್ರತಿನಿಧಿಸುವ ಪಿರಿಯಾಪಟ್ಟಣ ವಿಧಾನ ಸಭಾ ಕ್ಷೇತ್ರದಲ್ಲಿ ಪ್ರತಾಪ್ ಒಂದೇ ಒಂದು ರಸ್ತೆ ಇದುವರೆಗೆ ಮಾಡಿಸಿಲ್ಲ ಎಂದು ಸಚಿವ ಹೇಳಿದರು. ಸುಳ್ಳು ಹೇಳಿಕೊಂಡು ತಿರುಗುವುದು ಬಿಟ್ಟರೆ ಸಂಸದನಿಗೆ ಬೇರೇನೂ ಗೊತ್ತಿಲ್ಲ ಎಂದು ವೆಂಕಟೇಶ್ ಛೇಡಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ