ಸಿದ್ದರಾಮಯ್ಯ ವಿರುದ್ಧದ ಆರೋಪ ಸಾಬೀತಿಗೆ ಮತ್ತೊಂದು ಅವಕಾಶ ಸಿಕ್ತು ಎಂದ ಸ್ನೇಹಮಯಿ ಕೃಷ್ಣ! ಅಂಥದ್ದೇನಾಯ್ತು?
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಸಿಎಂ ಕುಟುಂಬ ಅಕ್ರಮ ನಿವೇಶನ ಪಡೆದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ, ಲೋಕಾಯುಕ್ತದ ಬಿ-ರಿಪೋರ್ಟ್ ಪ್ರಶ್ನಿಸಿ ಜಾರಿ ನಿರ್ದೇಶನಾಲಯ (ಇಡಿ) ಮೇಲ್ಮನವಿ ಸಲ್ಲಿಸಿದೆ. ಇದು ತಮ್ಮ ಹೋರಾಟಕ್ಕೆ ಪರೋಕ್ಷ ಬಲ ತಂದಿದೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಹೇಳಿದ್ದಾರೆ. ಇಬ್ಬರ ಮೇಲ್ಮನವಿಗಳನ್ನು ಉಚ್ಚ ನ್ಯಾಯಾಲಯ ಒಟ್ಟಿಗೆ ವಿಚಾರಣೆ ನಡೆಸಲಿದೆ.
ಮೈಸೂರು, ಏಪ್ರಿಲ್ 7: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA)ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬ ಅಕ್ರಮವಾಗಿ ನಿವೇಶನ ಪಡೆದಿದೆ ಎಂಬ ಆರೋಪದ ಪ್ರಕರಣದಲ್ಲಿ, ಲೋಕಾಯುಕ್ತ ಸಲ್ಲಿಸಿದ್ದ ಬಿ ರಿಪೋರ್ಟ್ ಅನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ (ED) ಇದೀಗ ಮೇಲ್ಮನವಿ ಸಲ್ಲಿಸಿದೆ. ಈ ಬೆಳವಣಿಗೆಯ ಕುರಿತು ದೂರುದಾರ ಹಾಗೂ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ‘ಟಿವಿ9’ಗೆ ಪ್ರತಿಕ್ರಿಯೆ ನೀಡಿದ್ದಾರೆ. ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಲೋಕಾಯುಕ್ತದ ಬಿ ರಿಪೋರ್ಟ್ ಅಂಗೀಕರಿಸಿದ ಆದೇಶವನ್ನು ಪ್ರಶ್ನಿಸಿ ಸ್ನೇಹಮಯಿ ಕೃಷ್ಣ ಈಗಾಗಲೇ ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ. ಇದೀಗ ಇಡಿ ಕೂಡ ಮೇಲ್ಮನವಿ ಸಲ್ಲಿಸಿರುವುದು ತಮ್ಮ ಹೋರಾಟಕ್ಕೆ ಪರೋಕ್ಷ ಬೆಂಬಲ ನೀಡಿದಂತಾಗಿದೆ ಎಂದು ಕೃಷ್ಣ ತಿಳಿಸಿದ್ದಾರೆ. ಒಂದು ತನಿಖಾ ಸಂಸ್ಥೆ ಸಾಕ್ಷಿಗಳಿಲ್ಲ ಎಂದು ಬಿ ರಿಪೋರ್ಟ್ ಸಲ್ಲಿಸಿದರೆ, ಮತ್ತೊಂದು ತನಿಖಾ ಸಂಸ್ಥೆ ಸಾಕ್ಷಿಗಳಿವೆ ಎಂದು ಹೇಳಿದಾಗ ನ್ಯಾಯಾಲಯವು ಅರ್ಜಿಯನ್ನು ಗಂಭೀರವಾಗಿ ಪರಿಗಣಿಸುತ್ತದೆ ಎಂದು ಅವರು ಹೇಳಿದ್ದಾರೆ.
ಇಡಿ ಮತ್ತು ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಎರಡೂ ಮೇಲ್ಮನವಿಗಳನ್ನು ಮಾನ್ಯ ಉಚ್ಚ ನ್ಯಾಯಾಲಯ ಒಟ್ಟಿಗೆ ವಿಚಾರಣೆ ನಡೆಸಿ, ಜನಪದ ವಿಶೇಷ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿ, ಸಿದ್ದರಾಮಯ್ಯ ಅವರ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ಅವಕಾಶ ನೀಡುವ ವಿಶ್ವಾಸವಿದೆ ಎಂದು ಸ್ನೇಹಮಯಿ ಕೃಷ್ಣ ಹೇಳಿದ್ದಾರೆ. ಮೇಲ್ಮನವಿ ಸಲ್ಲಿಸಿದ ನಂತರ, ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆ ದಿನಾಂಕ ನಿಗದಿಪಡಿಸಲಾಗುತ್ತದೆ. ನಂತರ ಸಾಕ್ಷಾಧಾರಗಳೊಂದಿಗೆ ವಾದ ವಿವಾದಗಳು ನಡೆಯಲಿವೆ.
