ಮುಡಾ ಹಗರಣ: ನಮ್ಮ ಪರ ತೀರ್ಪು ಬರದಿದ್ದರೆ ಸುಪ್ರೀಂ ಮೊರೆ ಹೋಗುತ್ತೇವೆಂದ ಸ್ನೇಹಮಯಿ ಕೃಷ್ಣ
ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ರಾಜ್ಯಪಾಲರ ಪ್ರಾಸಿಕ್ಯೂಷನ್ ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ಆಲಿಸಿ ತೀರ್ಪು ಕಾಯ್ದಿರಿಸಿದ್ದ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸಿಎಂ ವಿರುದ್ಧದ ದೂರುದಾರರಲ್ಲೊಬ್ಬರಾದ ಸ್ನೇಹಮಯಿ ಕೃಷ್ಣ ನೀಡಿರುವ ಪ್ರತಿಕ್ರಿಯೆ ಇಲ್ಲಿದೆ.
ಮೈಸೂರು, ಸೆಪ್ಟೆಂಬರ್ 24: ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರು ಅನುಮತಿ ನೀಡಿರುವುದಕ್ಕೆ ಸಂಬಂಧಿಸಿದ ತೀರ್ಪು ಕರ್ನಾಟಕ ಹೈಕೋರ್ಟ್ನಲ್ಲಿ ಇಂದು ಪ್ರಕಟವಾಗುತ್ತಿದೆ. ತೀರ್ಪು ನಮ್ಮ ಪರವಾಗಿಯೇ ಇರಲಿದೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಭರವಸೆ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ‘ಟಿವಿ9’ ಜತೆ ಮಾತನಾಡಿದ ಅವರು, ಕೋರ್ಟ್ನಲ್ಲಿ ನಮ್ಮ ಪರವಾಗಿ ತೀರ್ಪು ಬರುತ್ತದೆಂಬ ನಿರೀಕ್ಷೆ ಇದೆ ಎಂದಿದ್ದಾರೆ.
ಒಂದು ವೇಳೆ ನಮ್ಮ ಪರ ತೀರ್ಪು ಬರದಿದ್ದರೆ ಸುಪ್ರೀಂ ಕೋರ್ಟ್ ಮೊರೆ ಹೋಗುತ್ತೇವೆ. ಇದಕ್ಕೆ ತಾರ್ಕಿಕ ಅಂತ್ಯ ಕಾಣಿಸುವವರೆಗೂ ಹೋರಾಟ ನಿಲ್ಲಿಸಲ್ಲ. ನ್ಯಾಯಾಲಯಕ್ಕೆ ಪೂರಕ ಸಾಕ್ಷಿ ಕೊಟ್ಟಿದ್ದೇವೆ. ನಮ್ಮ ಸಾಕ್ಷಿಗಳ ಜೊತೆ ಸಿಎಂ ಸಹ ಸಾಕಷ್ಟು ಸಾಕ್ಷಿ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಅಧಿಕಾರ ಅವಧಿಯಲ್ಲೇ ನಿವೇಶನ ಪಡೆದಿದ್ದಾರೆ. ಆರೋಪಿಗಳು ನಾವು ತಪ್ಪು ಮಾಡಿಲ್ಲ ಅಂತಾ ಹೇಳುವುದು ಸಹಜ. ಆದೇಶದಲ್ಲೇ ಸ್ಪಷ್ಟವಾಗಿ 50:50 ಅನುಪಾತ ತಪ್ಪು ಅಂತಾ ಇದೆ. ಸಿಎಂ ಪತ್ನಿ ಸೈಟ್ ಪಡೆದಿರುವುದು ತಪ್ಪು ಎನ್ನುವುದು ಸ್ಪಷ್ಟವಾಗಿದೆ ಎಂದು ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ