ಬಸನಗೌಡ ಪಾಟೀಲ್ ಯತ್ನಾಳ್ ಕಾರಿಗೆ ಮುಸ್ಲಿಂ ಯುವಕರಿಂದ ಮುತ್ತಿಗೆ, ಕಪ್ಪು ಬಟ್ಟೆ ಪ್ರದರ್ಶನ
ವಿಜಯಪುರದಲ್ಲಿ ಹಿಂದೂ ಯುವಕರು ಮುಸ್ಲಿಂ ಯುವತಿಯನ್ನು ಮದುವೆಯಾದರೆ 5 ಲಕ್ಷ ರೂಪಾಯಿ ನೀಡುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆಗೆ ಮುಸ್ಲಿಂ ಯುವಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರ ಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆಯಿಂದ ಆಲಮೇಲ ಪಟ್ಟಣದಲ್ಲಿ ಕೆಲಕಾಲ ಗೊಂದಲದ ವಾತಾವರಣ ಉಂಟಾಗಿತ್ತು. ಪೊಲೀಸರು ಪ್ರತಿಭಟನಾಕಾರರ ಮೇಲೆ ಕ್ರಮ ಕೈಗೊಂಡಿದ್ದಾರೆ ಮತ್ತು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.
ವಿಜಯಪುರ, ಆಗಸ್ಟ್ 17: ಹಿಂದೂ ಯುವಕರು ಮುಸ್ಲಿಂ ಯುವತಿಯನ್ನು ಮದುವೆಯಾದರೇ ಅವರಿಗೆ 5 ಲಕ್ಷ ರೂ. ನೀಡುವುದಾಗಿ ಘೋಷಣೆ ಮಾಡಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಘೋಷಿಸಿದ್ದರು. ಈ ಹೇಳಿಕೆಯನ್ನು ಖಂಡಿಸಿ ವಿಜಯಪುರದಲ್ಲಿ ಮುಸ್ಲಿಂ ಯುವಕರು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಕಾರಿಗೆ ಮುತ್ತಿಗೆ ಹಾಕಿದರು. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ರವಿವಾರ ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣಕ್ಕೆ ಸಿದ್ಧಸಿರಿ ಸಹಕಾರಿ ಬ್ಯಾಂಕ್ ಶಾಖೆ ಹಾಗೂ ಎಸ್ ಮಾರ್ಟ್ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ವೇಳೆ ಮುಸ್ಲಿಂ ಯುವಕರು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಾರನ್ನು ತಡೆದು ಕಪ್ಪುಬಟ್ಟೆ ಪ್ರದರ್ಶಿಸಿದರು.
ಕೂಡಲೇ ಪೊಲೀಸರು ಕಪ್ಪು ಬಟ್ಟೆ ಪ್ರದರ್ಶಿಸಿದ ಕೆಲ ಯುವಕರನ್ನು ತಡೆದು, ವಶಕ್ಕೆ ಪಡೆದರು. ಆಲಮೇಲದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಆಲಮೇಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಗೆ ಕಪ್ಪು ಬಟ್ಟೆ ಪ್ರದರ್ಶಿಸಿದ್ದ ಮುಸ್ಲಿಂ ಯುವಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ಬಳಿಕ, ಯುವಕರ ಕುಟುಂಬದ ಮಹಿಳೆಯರು ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭೇಟಿಗೆ ಅವಕಾಶ ನೀಡುವಂತೆ ಪೊಲೀಸರ ಎದುರು ಪಟ್ಟು ಹಿಡಿದರು. ಆದರೆ, ಪೊಲೀಸರು ಭೇಟಿ ಅವಕಾಶ ನೀಡಲಿಲ್ಲ. ಬಳಿಕ, ಮುಸ್ಲಿಂ ಸಮುದಾಯದ ಜನರು ಪೊಲೀಸ್ ಠಾಣೆ ಎದುರು ಜಮಾವಣೆಯಾದರು. ಈ ಸಂದರ್ಭದಲ್ಲಿ ಪೊಲೀಸರು, ದೂರು ಕೊಡಿ ರಜಿಸ್ಟರ್ ಮಾಡಿಕೊಳ್ಳುತ್ತೇವೆ. ಗಲಾಟೆ ಮಾಡಲು ಬಿಡಲ್ಲವೆಂದರು.
