ಬಿಜೆಪಿಯಿಂದ ಸ್ಪರ್ಧಿಸಿದರೂ ಮುಸ್ಲಿಮರು ನಂಗೇನೇ ವೋಟು ಹಾಕೋದು ಅಂದರು ವರ್ತೂರು ಪ್ರಕಾಶ್

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 06, 2022 | 9:41 PM

ಅವರು ಆಡುವ ಮಾತನ್ನು ಕೇಳಿಸಿಕೊಳ್ಳಿ. ಮಾತಾಡುವಾಗ ತಮ್ಮ ಮುಂದೆ ಕುಳಿತಿರುವ ಒಬ್ಬ ಮುಸ್ಲಿಂ ವ್ಯಕ್ತಿಗೆ, ನಾನು ಬಿಜೆಪಿಯಿಂದ ಸ್ಪರ್ಧಿಸಿದರೆ ವೋಟು ಹಾಕ್ತೀಯಾ ಇಲ್ಲವಾ ಅಂತ ಕೇಳುತ್ತಾರೆ. ಆ ವ್ಯಕ್ತಿ ‘ನಮ್ ವೋಟು ನಿಂಗೇ ಅಣ್ಣಾ,’ ಅನ್ನುತ್ತಾರೆ!

ರಾಜಕಾರಣಿಗಳ ವರಸೆ ನಂಬಲಾಗಲ್ಲ ಮಾರಾಯ್ರೇ. ವರ್ತೂರು ಪ್ರಕಾಶ (Varthur Prakash) ನಿಮಗೆ ನೆನಪಿದ್ದಾರೆ ತಾನೇ? 2009 ಮತ್ತು 2013 ರಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದಿಂದ (Kolar Assembly Constituency) ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎರಡೂ ಬಾರಿ ಗೆದ್ದಿದ್ದರು. ಆಮೇಲೆ ಸದನದಲ್ಲಿ ಬಿಜೆಪಿಗೆ ಬೆಂಬಲ ಸೂಚಿಸಿ ಸದಾನಂದ ಗೌಡ ಮತ್ತು ಜಗದೀಶ ಶೆಟ್ಟರ್ ಅವರ ಸಂಪುಟದಲ್ಲಿ ಸಚಿವರಾಗಿದ್ದರು. 2018 ರ ವಿಧಾನ ಸಭಾ ಚುನಾವಣೆಯಲ್ಲಿ ಅವರು ಜೆಡಿ(ಎಸ್) ಪಕ್ಷದ ಶ್ರೀನಿವಾಸ ಗೌಡ (Srinivas Gowda) ಅವರಿಗೆ ಸೋತಿದ್ದರು. ಓಕೆ, ಮುಂದಿನ ವಿಧಾನ ಸಭೆ ಚುನಾವಣೆಗೆ ಒಂದು ವರ್ಷ ಇರುವಾಗ ಅವರು ಸುದ್ದಿಯಲ್ಲಿದ್ದಾರೆ. ಶುಕ್ರವಾರದಂದು ಕೋಲಾರನಲ್ಲಿ ಅವರು ತಮ್ಮ ಬೆಂಬಲಿಗರಿಗೆ ಬಾಡೂಟದ ಔತಣವೇರ್ಪಡಿಸಿದ್ದರು. ನಮಗೆ ಲಭ್ಯವಾಗಿರುವ ಮಾಹಿತಿಯೇನೆಂದರೆ ಅವರು ಬಿಜೆಪಿ ಸೇರುವ ತವಕದಲ್ಲಿದ್ದಾರೆ. ತಮ್ಮ ಶಕ್ತಿ, ಸಾಮರ್ಥ್ಯ ಮತ್ತು ಜನ ಬೆಂಬಲ ತೋರಿಸಲೆಂದೇ ಪ್ರಕಾಶ್ ಔತಣಕೂಟ ಏರ್ಪಡಿಸಿದ್ದರು.

ತಾನು ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದರೂ ಮುಸ್ಲಿಂ ಸಮುದಾಯದ ವೋಟುಗಳು ತನಗೆ ಬೀಳುತ್ತವೆ ಎಂಬ ಸಂದೇಶವನ್ನು ಪಕ್ಷದ ನಾಯಕರಿಗೆ ತಲುಪಿಸುವ ಗುರಿಯೂ ಅವರಿಗಿತ್ತು ಅನಿಸುತ್ತದೆ. ಅವರು ಆಡುವ ಮಾತನ್ನು ಕೇಳಿಸಿಕೊಳ್ಳಿ. ಮಾತಾಡುವಾಗ ತಮ್ಮ ಮುಂದೆ ಕುಳಿತಿರುವ ಒಬ್ಬ ಮುಸ್ಲಿಂ ವ್ಯಕ್ತಿಗೆ, ನಾನು ಬಿಜೆಪಿಯಿಂದ ಸ್ಪರ್ಧಿಸಿದರೆ ವೋಟು ಹಾಕ್ತೀಯಾ ಇಲ್ಲವಾ ಅಂತ ಕೇಳುತ್ತಾರೆ. ಆ ವ್ಯಕ್ತಿ ‘ನಮ್ ವೋಟು ನಿಂಗೇ ಅಣ್ಣಾ,’ ಅನ್ನುತ್ತಾರೆ!

ಅ ವ್ಯಕ್ತಿ ಹಾಗೆ ಹೇಳಿದ ಬಳಿಕ ಪ್ರಕಾಶ್, ಮುಸ್ಲಿಮರು ಯಾವತ್ತಿಗೂ ನಂಗೇನೇ ವೋಟು ಹಾಕೋದು, ಅವರು ಒಂದ್ಹೊತ್ತಿಗೆ ತಮ್ಮ ಹೆಂಡ್ತಿ ಮಕ್ಕಳನ್ನು ಬಿಟ್ಟಾರು, ಆದರೆ ವರ್ತೂರು ಪ್ರಕಾಶ್ ನ ಬಿಡಲ್ಲ ಅಂತ ಹೆಮ್ಮೆಯಿಂದ ಎಂದು ಅವರು ಹೇಳುತ್ತಾರೆ. ಅವರ ಮಾತು ಬಿಜೆಪಿ ಕಚೇರಿಯನ್ನು ತಲುಪಿರಬಹುದು.

ಇದನ್ನೂ ಓದಿ:  ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನಾಪ್ ಪ್ರಕರಣದ ಪ್ರಮುಖ ಆರೋಪಿ ಮೇಲೆ ಬೆಂಗಳೂರು ಪೊಲೀಸರಿಂದ ಫೈರಿಂಗ್