ದಸರಾ ಜಂಬೂಸವಾರಿ: ಮಹೇಂದ್ರ ಆನೆಯನ್ನು ಕ್ಯಾಪ್ಟನ್ ರೇಸ್ನಿಂದ ಹೊರಗಿಟ್ಟಿದ್ದಕ್ಕೆ ಕಾರಣ ಇಲ್ಲಿದೆ ನೋಡಿ
ಮೈಸೂರು ದಸರಾ 2026ರ ಅಂಬಾರಿ ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆಯಿಂದ ಮಹೇಂದ್ರ ಆನೆಯನ್ನು ತಾತ್ಕಾಲಿಕವಾಗಿ ಹೊರಗಿಡಲಾಗಿದೆ. ಭಾರ ಹೊತ್ತು ಸಾಗಲು ಆನೆ ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಡಿಸಿಎಫ್ ಪ್ರಭುಗೌಡ ತಿಳಿಸಿದ್ದಾರೆ. ಇದೀಗ ಧನಂಜಯ, ಪ್ರಶಾಂತ, ಸುಗ್ರೀವ ಮತ್ತು ಏಕಲವ್ಯ ಆನೆಗಳ ಪೈಕಿ ಒಂದನ್ನು ಕ್ಯಾಪ್ಟನ್ ಆಗಿ ಆಯ್ಕೆ ಮಾಡಲಾಗುತ್ತದೆ.
ಮೈಸೂರು, ಅಕ್ಟೋಬರ್ 9: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ರ ಸಿದ್ಧತೆಗಳು ಬಿರುಸಿನಿಂದ ಸಾಗಿವೆ. ಈ ಬಾರಿ ದಸರಾ ಅಂಬಾರಿ ಹೊರುವ ಕ್ಯಾಪ್ಟನ್ ಆನೆಯ ಆಯ್ಕೆ ಪ್ರಕ್ರಿಯೆಯಿಂದ ಮಹೇಂದ್ರ ಆನೆಯನ್ನು ತಾತ್ಕಾಲಿಕವಾಗಿ ಹೊರಗಿಡಲಾಗಿದೆ. ಮಹೇಂದ್ರ ಆನೆ ಮಾನಸಿಕವಾಗಿ ಭಾರ ಹೊತ್ತು ಸಾಗಲು ಇಷ್ಟಪಡುತ್ತಿಲ್ಲ ಎಂದು ಡಿಸಿಎಫ್ ಪ್ರಭುಗೌಡ ತಿಳಿಸಿದ್ದಾರೆ. ಮೊನ್ನೆ ಮಳೆ ಬಂದ ಕಾರಣ ಮರದ ಅಂಬಾರಿ ಹೊರುವ ತಾಲೀಮನ್ನು ಈ ಹಿಂದೆ ಸ್ಥಗಿತಗೊಳಿಸಲಾಗಿತ್ತು. ಈ ಬೆಳವಣಿಗೆಯನ್ನು ಮಹೇಂದ್ರ ಆನೆ ನೆನಪಿನಲ್ಲಿಟ್ಟುಕೊಂಡಿದ್ದು, ತಾನು ಸುಮ್ಮನೆ ನಿಂತರೆ ಭಾರವನ್ನು ಇಳಿಸುತ್ತಾರೆ ಎಂಬ ಮನಸ್ಥಿತಿಗೆ ಬಂದಿದೆ. ನಿನ್ನೆ ಕೂಡ ಇದೇ ಕಾರಣಕ್ಕೆ ತಾಲೀಮನ್ನು ಅರ್ಧದಲ್ಲೇ ನಿಲ್ಲಿಸಲಾಗಿದೆ. ಆನೆಯ ಮನಸ್ಸಿನಿಂದ ಈ ಭಾವನೆಯನ್ನು ದೂರಮಾಡುವ ಕೆಲಸ ಮಾಡಬೇಕಿದೆ. ಸದ್ಯಕ್ಕೆ ಮಹೇಂದ್ರ ಆನೆಯನ್ನು ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆಯಿಂದ ಹೊರಗಿಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಧನಂಜಯ, ಪ್ರಶಾಂತ, ಸುಗ್ರೀವ, ಏಕಲವ್ಯ ನಡುವೆ ಆಯ್ಕೆ
ಸದ್ಯ ಧನಂಜಯ, ಪ್ರಶಾಂತ, ಸುಗ್ರೀವ ಮತ್ತು ಏಕಲವ್ಯ ಆನೆಗಳು ಅಂಬಾರಿ ಹೊರುವ ತಾಲೀಮಿನಲ್ಲಿ ಭಾಗವಹಿಸುತ್ತಿವೆ. ಈ ನಾಲ್ಕು ಆನೆಗಳು ಗರಿಷ್ಠ ಒಂದು ಸಾವಿರ ಕೆ.ಜಿ. ತೂಕವನ್ನು ಹೊತ್ತು ಸಾಗುತ್ತಿವೆ. ಈ ಪೈಕಿ ಅಂತಿಮವಾಗಿ ಒಂದು ಆನೆಯನ್ನು ದಸರಾ ಅಂಬಾರಿಯ ಕ್ಯಾಪ್ಟನ್ ಆಗಿ ಆಯ್ಕೆ ಮಾಡಲಾಗುತ್ತದೆ ಎಂದು ಡಿಸಿಎಫ್ ಪ್ರಭುಗೌಡ ಮಾಹಿತಿ ನೀಡಿದ್ದಾರೆ.
ಏತನ್ಮಧ್ಯೆ, ದಸರಾ ಸಿದ್ಧತೆಯ ಭಾಗವಾಗಿ ಎರಡನೇ ಹಂತದ ಕುಶಾಲತೋಪು ತಾಲೀಮು ಕೂಡ ಯಶಸ್ವಿಯಾಗಿ ಪೂರ್ಣಗೊಂಡಿದೆ. ದೊಡ್ಡಕೆರೆ ಮೈದಾನದಲ್ಲಿ ನಡೆದ ತಾಲೀಮಿನಲ್ಲಿ ಗಜಪಡೆ ಮತ್ತು ಅಶ್ವಪಡೆ ಸಿಡಿಮದ್ದುಗಳ ಶಬ್ದಕ್ಕೆ ಯಾವುದೇ ಗಲಿಬಿಲಿಗೊಳ್ಳದೆ ಶಾಂತವಾಗಿ ನಿಂತಿದ್ದವು. ಇದು ತಾಲೀಮು ಯಶಸ್ವಿಯಾಗಿ ನಡೆದಿರುವುದನ್ನು ಸೂಚಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

