ಮತದಾರರ ಪಟ್ಟಿಗೆ ಆಧಾರ್ ದಾಖಲೆ ನೀಡಬಹುದಾ? ಚುನಾವಣಾ ಆಯೋಗದ ಸ್ಪಷ್ಟನೆ ಇಲ್ಲಿದೆ

Updated on: Oct 27, 2025 | 6:20 PM

"ಗುರುತಿಗಾಗಿ ಆಧಾರ್ ಅನ್ನು 12ನೇ ಸ್ಥಾನದಲ್ಲಿ ಸೇರಿಸಲಾದ ದಾಖಲೆಗಳ ಸೂಚಕ ಪಟ್ಟಿಯನ್ನು ಬಹುತೇಕ ಎಲ್ಲಾ ಚುನಾವಣಾ ಆಯುಕ್ತರೊಂದಿಗೆ ಚರ್ಚಿಸಿದ ನಂತರ ಸಿದ್ಧಪಡಿಸಲಾಗಿದೆ. ಆದರೂ, ವಿಚಾರಣೆ ನಡೆದಾಗ ಮತ್ತು ಯಾರಾದರೂ ಪೌರತ್ವವನ್ನು ಸಾಬೀತುಪಡಿಸಬೇಕಾದರೆ ಅವರು ಬೇರೆ ಯಾವುದಾದರೂ ದಾಖಲೆಯನ್ನು ಸಲ್ಲಿಸಲೇಬೇಕಾಗುತ್ತದೆ. ಆಧಾರ್ ಕೇವಲ ಗುರುತಿನ ಚೀಟಿಯಾಗಿರುತ್ತದೆ" ಎಂದು ಚುನಾವಣಾ ಆಯೋಗ ಎಸ್​ಐಆರ್​ ಘೋಷಣೆ ವೇಳೆ ಹೇಳಿದೆ.

ನವದೆಹಲಿ, ಅಕ್ಟೋಬರ್ 27: ನಾಳೆಯಿಂದಲೇ ರಾಷ್ಟ್ರವ್ಯಾಪಿ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಾರಂಭವಾಗುತ್ತದೆ. ಈ ಕುರಿತಾಗಿ ಸಲ್ಲಿಸಬೇಕಾದ ದಾಖಲೆಗಳಲ್ಲಿ ಆಧಾರ್ ಕಾರ್ಡ್ ನೀಡುವ ಕುರಿತು ಚುನಾವಣಾ ಆಯೋಗ ಏನು ಹೇಳಿದೆ? ಎಂಬ ಮಾಹಿತಿ ಇಲ್ಲಿದೆ. ಎಸ್​ಐಆರ್ ಪ್ರಕ್ರಿಯೆಗೆ 11 ದಾಖಲೆಗಳನ್ನು ನೀಡಬಹುದು ಎಂದು ಚುನಾವಣಾ ಆಯೋಗ ಹೇಳಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಇಂದು 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿಯ ಪ್ಯಾನ್-ಇಂಡಿಯಾ ವಿಶೇಷ ಪರಿಷ್ಕರಣೆ (SIR) ಅನ್ನು ಘೋಷಿಸಿದರು.

“ಅಕ್ಟೋಬರ್ 28ರಿಂದ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಾರಂಭವಾಗುವ ವಿಶೇಷ ತೀವ್ರ ಪರಿಷ್ಕರಣೆ (SIR) ನಲ್ಲಿ ಆಧಾರ್ ಅನ್ನು ಗುರುತಿನ ದಾಖಲೆಯಾಗಿ ಮಾತ್ರ ಬಳಸಲಾಗುತ್ತದೆ” ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಎಸ್​ಐಆರ್ 2026ರ ಫೆಬ್ರವರಿ 7ರಂದು ಮುಕ್ತಾಯಗೊಳ್ಳಲಿದೆ.

“ಆಧಾರ್ ಕಾರ್ಡ್ ಜನ್ಮ ದಿನಾಂಕ ಅಥವಾ ವಾಸದ ಪುರಾವೆಯಲ್ಲ” ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. “ಆಧಾರ್ ಪೌರತ್ವದ ಪುರಾವೆಯಲ್ಲ, ಆದರೆ SIR ಪ್ರಕ್ರಿಯೆಯಲ್ಲಿ ಗುರುತಿನ ಪುರಾವೆಯಾಗಿ ಅದನ್ನು ನೀಡಬಹುದು” ಎಂದು ಅವರು ತಿಳಿಸಿದ್ದಾರೆ.

SIRನ ಎರಡನೇ ಹಂತ ಅಂಡಮಾನ್ ಮತ್ತು ನಿಕೋಬಾರ್, ಛತ್ತೀಸ್‌ಗಢ, ಗೋವಾ, ಗುಜರಾತ್, ಕೇರಳ, ಲಕ್ಷದ್ವೀಪ, ಮಧ್ಯಪ್ರದೇಶ, ಪುದುಚೇರಿ, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ನಡೆಯಲಿದೆ. ಡಿಸೆಂಬರ್ 9ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದ್ದು, ಫೆಬ್ರವರಿ 7ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ