ತಾಳಿ ಕಟ್ಟುವ ಕೊನೆಯ ಕ್ಷಣದಲ್ಲಿ ಪೊಲೀಸ್ ಎಂಟ್ರಿ: ಹುಡುಗಿಗೆ 18 ತುಂಬಲು ಬಾಕಿ ಇತ್ತು ಕೇವಲ 4 ತಿಂಗಳು
ನೆಲಮಂಗಲದಲ್ಲಿ ನಿಗದಿಯಾಗಿದ್ದ ಬಾಲ್ಯ ವಿವಾಹವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಯಶಸ್ವಿಯಾಗಿ ತಡೆದಿದ್ದಾರೆ. 18 ವರ್ಷ ತುಂಬದ ಬಾಲಕಿಗೆ ಮದುವೆ ಮಾಡಿಸಲು ಮುಂದಾದ ಪೋಷಕರಿಗೆ ಅಧಿಕಾರಿಗಳು ಕಾನೂನಿನ ಮಹತ್ವ ತಿಳಿಸಿ ಹೇಳಿದರು. ವರನು ಬಾಲಕಿ ವಯಸ್ಸಿಗೆ ಬಂದ ನಂತರ ಮದುವೆಯಾಗಲು ಒಪ್ಪಿಕೊಂಡಿದ್ದು, ಬಾಲ್ಯ ವಿವಾಹ ಅಪರಾಧ ಎಂಬುದಕ್ಕೆ ಇದು ಮತ್ತೊಂದು ನಿದರ್ಶನ.
ನೆಲಮಂಗಲ, ಏ.15: ವಯಸ್ಸು ತುಂಬದ ಬಾಲಕಿಗೆ ಮದುವೆ ಮಾಡಲು ಮುಂದಾಗಿದ್ದ ಪೋಷಕರಿಗೆ ಅಧಿಕಾರಿಗಳು ಶಾಕ್ ನೀಡಿದ್ದಾರೆ. ರಿಸೆಪ್ಷನ್ ಮುಗಿಸಿ ತಾಳಿ ಕಟ್ಟಬೇಕಿದ್ದ ಸಂಭ್ರಮದ ಕ್ಷಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ದಾಳಿ ನಡೆಸಿ ವಿವಾಹವನ್ನು ತಡೆದಿದ್ದಾರೆ. ನೆಲಮಂಗಲದ ಕಾವಾಡಿ ಮಠದ ಕಲ್ಯಾಣ ಮಂಟಪದಲ್ಲಿ ಕೇಶವ್ ಗೌಡ ಹಾಗೂ ಕೋಮಲ ಎಂಬುವವರ ವಿವಾಹ ನಿಶ್ಚಯವಾಗಿತ್ತು. ನಿನ್ನೆ ರಾತ್ರಿ ಅದ್ಧೂರಿಯಾಗಿ ರಿಸೆಪ್ಷನ್ ಕೂಡ ಮುಗಿದಿತ್ತು. ಆದರೆ ಇಂದು ತಾಳಿ ಕಟ್ಟುವ ಕೆಲವೇ ಸಮಯದ ಮೊದಲು ಅಧಿಕಾರಿಗಳು ದಾಳಿ ನಡೆಸಿದ್ದಾರೆ. 18 ವರ್ಷ ತುಂಬಿದೆ ಎಂದು ಭಾವಿಸಿ ಪೋಷಕರು ಮದುವೆ ನಿಶ್ಚಯಿಸಿದ್ದರು. ಆದರೆ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಅನಿತಾ ಲಕ್ಷ್ಮಿ ನೇತೃತ್ವದ ತಂಡ ದಾಖಲೆಗಳನ್ನು ಪರಿಶೀಲಿಸಿದಾಗ, ಬಾಲಕಿಗೆ 18 ವರ್ಷ ತುಂಬಲು ಇನ್ನೂ 4 ತಿಂಗಳು ಬಾಕಿ ಇರುವುದು ದೃಢಪಟ್ಟಿದೆ. ಮದುವೆಗೆ ಈಗಾಗಲೇ 5 ಲಕ್ಷ ರೂಪಾಯಿ ಖರ್ಚಾಗಿದೆ ಎಂದು ಕುಟುಂಬಸ್ಥರು ಬೇಸರ ವ್ಯಕ್ತಪಡಿಸಿದರೂ, ಕಾನೂನಿಗೆ ತಲೆಬಾಗಿ ಮದುವೆ ನಿಲ್ಲಿಸಿದ್ದಾರೆ. “4 ತಿಂಗಳ ನಂತರ ಅದೇ ಹುಡುಗಿಯನ್ನು ಮದುವೆಯಾಗುತ್ತೇನೆ” ಎಂದು ವರ ಕೇಶವ್ ಗೌಡ ಅಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಬಾಲ್ಯ ವಿವಾಹ ಕಾನೂನುಬಾಹಿರ ಎಂದು ಪೋಷಕರಿಗೆ ತಿಳಿಹೇಳಲಾಗಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
‘ಆ ಸಿನಿಮಾ ಬಳಿಕ ಮಹಿಳಾ ಫ್ಯಾನ್ಸ್ ಹೆಚ್ಚಾಗಿದ್ದಾರೆ’; ವಿನೋದ್ ರಾಜ್
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
