ನೆಲಮಂಗಲ: ನಿಮಗೆ ಊಟ ಹಾಕಲ್ಲ, ಎದ್ದೋಗಿ; ತಿಲಕ ಇಟ್ಟುಕೊಂಡು ಕುಳಿತ ವ್ಯಕ್ತಿಗೆ ಮದುವೆ ಮನೆಯಲ್ಲಿ ಅವಮಾನ
ಮುಸ್ಲಿಂ ಕುಟುಂಬವೊಂದರ ಮದುವೆ ಊಟಕ್ಕೆ ಬಂದ ಹಿಂದೂ ವ್ಯಕ್ತಿಯನ್ನು ಹಿಂದೂ ಎಂಬ ಕಾರಣಕ್ಕೆ ಪಂಕ್ತಿಯಿಂದ ಎಬ್ಬಿಸಿ ಕಳುಹಿಸಿ ಅವಮಾನಿಸಿದ ಘಟನೆ ನೆಲಮಂಗಲದ ಇಸ್ಲಾಂಪುರದಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ಉಣ್ಣಲು ಕುಳಿತವನ ಹಿಂದೂ ಎಂಬ ಕಾರಣಕ್ಕೆ ಎಬ್ಬಿಸಿ ಅವಮಾನಿಸಿದ್ದಕ್ಕೆ ವ್ಯಾಪಕ ಆಕ್ಷೇಪ ವ್ಯಕ್ತವಾಗುತ್ತಿದೆ.
ನೆಲಮಂಗಲ, ಅಕ್ಟೋಬರ್ 31: ತಿಲಕ ಇಟ್ಟುಕೊಂಡು ಬಂದಿದ್ದರಿಂದ ಹಿಂದೂ ವ್ಯಕ್ತಿ ಎಂದು ಗೊತ್ತಾದ ಕಾರಣ, ‘ನಿಮಗೆ ಊಟ ಹಾಕಲ್ಲ, ಎದ್ದೋಗಿ’ ಎಂದು ವ್ಯಕ್ತಿಯೊಬ್ಬರನ್ನು ಅವಮಾನಿಸಿದ ಘಟನೆ ನೆಲಮಂಗಲದಲ್ಲಿ ನಡೆದಿದೆ. ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಇಸ್ಲಾಂಪುರದ ಅನ್ಯ ಕೋಮಿನ ನಿವಾಸಿಯೊಬ್ಬರ ಕುಟುಂಬದ ಮದುವೆ ಸಮಾರಂಭಕ್ಕೆ ರಾಜು ಎಂಬವರು ಊಟಕ್ಕೆ ಬಂದಿದ್ದರು. ವಧುವಿನ ಸಂಬಂಧಿಯೊಬ್ಬರು ಕರೆದಿದ್ದರಿಂದ ಅವರು ಸಮಾರಂಭಕ್ಕೆ ಬಂದಿದ್ದರು. ಆದರೆ, ಊಟಕ್ಕೆ ಕುಳಿತಿದ್ದಾಗ ಅವರ ಹಣೆಯಲ್ಲಿ ತಿಲಕ ಇದ್ದುದನ್ನು ನೋಡಿ ಅವಮಾನಿಸಲಾಗಿದೆ. ‘ನಿಮಗೆ ಊಟ ಹಾಕುವುದಿಲ್ಲ, ನಿಮ್ಮನ್ನು ಯಾರು ಕರೆದಿದ್ದು’ ಎಂದು ಗದರಲಾಗಿದೆ. ಹಿಂದೂಗಳಿಗೆ ನಾವು ಊಟ ಹಾಕುವುದಿಲ್ಲ ಇಲ್ಲಿಂದ ಎದ್ದು ಹೋಗಿ ಎಂದು ಕಳುಹಿಸಿದ್ದಾರೆ.
ಇದೇ ವೇಳೆ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು, ಹೀಗೆಲ್ಲ ಮಾಡಬಾರದು. ಊಟಕ್ಕೆ ಕುಳಿತವರನ್ನು ಎಬ್ಬಿಸುವುದು ಸರಿಯಲ್ಲ. ಹಿಂದೂಗಳು ಬರಬಾರದು ಎಂದಿದ್ದರೆ ನೀವು ಕರೆಯಲೇ ಬಾರದಿತ್ತು. ನಾವು ಕೂಡ ನಿಮ್ಮ ಅಣ್ಣ-ತಮ್ಮಂದಿರು ತಾನೆ? ಅವರೇನೋ ಪಾಪ ಅಮಾಯಕರು, ಎಸ್ಸಿ ಎಸ್ಟಿ ಜನ, ಬಡವರು ಗೊತ್ತಿಲ್ಲದೆ ಬಂದು ಊಟಕ್ಕೆ ಬಂದಿದ್ದಾರೆ. ಉಣ್ಣಲು ಕುಳಿತವರನ್ನು ಎಬ್ಬಿಸುವುದು ಮಾನವೀಯತೆ ಅಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿರುವುದೂ ವೈರಲ್ ವಿಡಿಯೋದಲ್ಲಿದೆ.
ವಿಡಿಯೋ, ವರದಿ: ಮಂಜುನಾಥ್, ಟಿವಿ9 ನೆಲಮಂಗಲ

