ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ

Updated on: Aug 31, 2026 | 3:55 PM

ನೇಪಾಳದ ಭೀಕರ ಪ್ರವಾಹದಲ್ಲಿ ತುಮಕೂರಿನ ಇಬ್ಬರು ಸೇರಿದಂತೆ ಒಟ್ಟು 275 ಭಾರತೀಯರು ನಾಪತ್ತೆಯಾಗಿದ್ದಾರೆ. ರಂಗು ಸುಧೀರ್ ಮತ್ತು ಕೀರ್ತಿ ಆಚಾರ್ಯ ಎಂಬುವವರು ಆಗಸ್ಟ್ 22ರಂದು ನೇಪಾಳಕ್ಕೆ ತೆರಳಿದ್ದರು. ಆಗಸ್ಟ್ 26ರಿಂದ ಸಂಪರ್ಕಕ್ಕೆ ಸಿಗುತ್ತಿಲ್ಲ. ನಾಪತ್ತೆಯಾದವರ ರಕ್ಷಣೆಗೆ ಕರ್ನಾಟಕ ಸರ್ಕಾರ ನೋಡಲ್ ಅಧಿಕಾರಿ ಅಭಿಜಿತ್ ಗೌಡರನ್ನು ನೇಮಿಸಿದೆ.

ತುಮಕೂರು, ಆ.31: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹವು ವ್ಯಾಪಕ ವಿನಾಶವನ್ನುಂಟುಮಾಡಿದ್ದು, ಹಲವು ಮಂದಿ ಪ್ರವಾಸಿಗರು ನಾಪತ್ತೆಯಾಗಿದ್ದಾರೆ. ಈ ದುರಂತದಲ್ಲಿ ತುಮಕೂರು ಮೂಲದ ಇಬ್ಬರು ಸೇರಿದಂತೆ ಒಟ್ಟು 275 ಭಾರತೀಯರು ನಾಪತ್ತೆಯಾಗಿರುವುದು ಕಳವಳ ಮೂಡಿಸಿದೆ. ತುಮಕೂರಿನ ನೃಪತುಂಗ ಬಡಾವಣೆಯ ನಿವಾಸಿಗಳಾದ ರಂಗು ಸುಧೀರ್ ಮತ್ತು ಕೀರ್ತಿ ಆಚಾರ್ಯ ಅವರು ಆಗಸ್ಟ್ 22ರಂದು ನೇಪಾಳ ಪ್ರವಾಸಕ್ಕೆ ತೆರಳಿದ್ದರು. ಆಗಸ್ಟ್ 26ರಂದು ಗುರುಪ್ರಸಾದ್ ಅವರಿಗೆ ಕರೆ ಮಾಡಿದ್ದು, ಅಂದಿನಿಂದ ಸಂಪರ್ಕಕ್ಕೆ ಸಿಕ್ಕಿಲ್ಲ. ಕರ್ನಾಟಕದಿಂದ ನೇಪಾಳಕ್ಕೆ ಪ್ರವಾಸಕ್ಕೆ ತೆರಳಿದ್ದ 67 ಕನ್ನಡಿಗರ ತಂಡವೂ ನಾಪತ್ತೆಯಾಗಿದೆ, ಅದರಲ್ಲಿ 28 ಮಂದಿ ಬೆಂಗಳೂರಿನವರು ಸೇರಿದ್ದಾರೆ. ಇಶಾ ಫೌಂಡೇಶನ್‌ನ ಪ್ರವಾಸಿಗರೂ ನಾಪತ್ತೆಯಾದವರ ಪಟ್ಟಿಯಲ್ಲಿದ್ದಾರೆ. ನಾಪತ್ತೆಯಾದ ಕನ್ನಡಿಗರ ರಕ್ಷಣೆಗೆ ಕರ್ನಾಟಕ ಸರ್ಕಾರ ಬದ್ಧವಾಗಿದೆ. ನೋಡಲ್ ಅಧಿಕಾರಿಯಾಗಿ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಅಭಿಜಿತ್ ಗೌಡ ಅವರನ್ನು ನೇಮಿಸಲಾಗಿದೆ. ಅವರು ನಾಪತ್ತೆಯಾದವರ ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಎಂಇಎ ಹಾಗೂ ಟಿಎಆರ್ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ಪ್ರಯತ್ನಿಸುತ್ತಿದ್ದಾರೆ. ಕೆಲ ಕನ್ನಡಿಗರು ಕೂದಲೆಳೆ ಅಂತರದಲ್ಲಿ ಪ್ರವಾಹದಿಂದ ಪಾರಾಗಿ ವಾಪಸ್ ಆಗಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Aug 31, 2026 02:55 PM
Loading...
Unable to load recommendations.
Follow Us