ನಿಮ್ಮ ಸಂಗಾತಿಯನ್ನು ಅನುಮಾನಿಸುವುದು ಬಿಟ್ಟು ಅವರೊಂದಿಗೆ ಭಾವನಾತ್ಮವಾಗಿ ಬೆಸೆಯುವ ಪ್ರಯತ್ನ ಮಾಡಿ: ಡಾ ಸೌಜನ್ಯ ವಶಿಷ್ಠ
ಅನುಮಾನವನ್ನು ಮನಸ್ಸಿನಲ್ಲಿಟ್ಟುಕೊಂಡು ಮೊಬೈಲ್ ಚೆಕ್ ಮಾಡಿದರೆ, ಅನುಮಾನಕ್ಕೆ ಅಸ್ಪದವಾಗುವಂಥದ್ದು ಏನೂ ಸಿಗದಿದ್ದರೂ ತಲೆಯಲ್ಲಿ ಹೊಕ್ಕಿರುವ ಅನುಮಾನದ ಹುಳಕ್ಕೆ ಸಮಾಧಾನವಾಗುವುದಿಲ್ಲ. ಅದು ತನ್ನ ಕೆಲಸವನ್ನು ಮುಂದುವರೆಸುತ್ತದೆ.
ಪತಿ-ಪತ್ನಿಯರ ನಡುವೆ, ಪ್ರೇಮಿಗಳು ಇಲ್ಲವೇ ಲಿವ್-ಇನ್ ಸಂಬಂಧದಲ್ಲಿರುವವರ ಪ್ರೀತಿ ಕೊನೆವೆರೆಗೂ ಗಟ್ಟಿಯಾಗಿರಬೇಕಾದರೆ, ಅದರ ತಳಹದಿ ಚೆನ್ನಾಗಿರಬೇಕು ಅಂತ ಮನಶಾಸ್ತ್ರಜ್ಞೆ ಡಾ ಸೌಜನ್ಯ ವಶಿಷ್ಠ ಹೇಳುತ್ತಾರೆ. ಸುಳ್ಳು, ಅಪನಂಬಿಕೆ, ಮೋಸ, ಅವಿಶ್ವಾಸ ಮೊದಲಾದವುಗಳನ್ನೇ ಬುನಾದಿಯಾಗಿಸಿ ಪ್ರೀತಿಯ ಸೌಧ ಕಟ್ಟುವುದು ಅಥವಾ ಸಹಬಾಳ್ವೆ ನಡೆಸುವುದು ಸಾಧ್ಯವಾಗುವುದಿಲ್ಲ. ಗಂಡಹೆಂಡಿರ ನಡುವೆ ಮನಸ್ತಾಪಗಳು, ವಿರಸ ಮತ್ತು ಜಗಳಗಳು ಹುಟ್ಟೋದೇ ಅಪನಂಬಿಕೆಯಿಂದ. ಅನುಮಾನ ಪೆದ್ದ ರೋಗಂ ಅಂತ ತೆಲುಗಿನಲ್ಲಿ ಒಂದು ನಾಣ್ಣುಡಿ ಇದೆ. ಅದು ಆಕ್ಷರಶಃ ಸತ್ಯ ಎಂದು ಸೌಜನ್ಯ ಹೇಳುತ್ತಾರೆ.
ಗಂಡನ ಮೊಬೈಲನ್ನು ಹೆಂಡತಿ ಚೆಕ್ ಮಾಡುವುದು ಮತ್ತು ಹೆಂಡತಿಯ ಮೊಬೈಲನ್ನು ಗಂಡ ಚೆಕ್ ಮಾಡುವುದು ಬಹಳ ಕೆಟ್ಟ ಚಾಳಿ ಅಂತ ಡಾ ಸೌಜನ್ಯ ಬಣ್ಣಿಸುತ್ತಾರೆ. ಪರಸ್ಪರರ ನಡುವೆ ಪ್ರೀತಿ ವಿಶ್ವಾಸಕ್ಕಿಂತ ಜಾಸ್ತಿ ಸಂಶಯ, ಸಂದೇಹಗಳಿದ್ದರೆ ಹಾಗೆ ಮಾಡುವ ಪ್ರೇರೇಪಣೆಯಾಗುತ್ತದೆ. ಅದು ತಪ್ಪು. ಅನುಮಾನವನ್ನು ಮನಸ್ಸಿನಲ್ಲಿಟ್ಟುಕೊಂಡು ಮೊಬೈಲ್ ಚೆಕ್ ಮಾಡಿದರೆ, ಅನುಮಾನಕ್ಕೆ ಅಸ್ಪದವಾಗುವಂಥದ್ದು ಏನೂ ಸಿಗದಿದ್ದರೂ ತಲೆಯಲ್ಲಿ ಹೊಕ್ಕಿರುವ ಅನುಮಾನದ ಹುಳಕ್ಕೆ ಸಮಾಧಾನವಾಗುವುದಿಲ್ಲ. ಅದು ತನ್ನ ಕೆಲಸವನ್ನು ಮುಂದುವರೆಸುತ್ತದೆ.
ಅದೇ ಅನುಮಾನ ಪೆಡಂಭೂತವಾಗಿ ಬೆಳೆಯಲಾರಂಭಿಸಿ ಅದು ಸಂಬಂಧವನ್ನೇ ಕೊನೆಗಾಣಿಸುವ ಹಂತಕ್ಕೆ ತಲುಪುತ್ತದೆ ಎಂದು ಡಾ ಸೌಜನ್ಯ ಹೇಳುತ್ತಾರೆ. ಹಾಗಾಗಿ ಅನುಮಾನ ಪಡುವ ಗುಣ ಗಂಡನಲ್ಲಿರಲಿ ಇಲ್ಲವೇ ಹೆಂಡತಿಯಲ್ಲಿ, ಅವರು ತಮ್ಮ ವರ್ತನೆ, ಸ್ವಭಾವ ತಿದ್ದುಕೊಳ್ಳುವ ಜರೂರತ್ತು ಇದೆ.
ನಿಮ್ಮ ಸಂಗಾತಿಗೆ ನಿಮ್ಮ ಮೇಲೆ ಹೆಚ್ಚು ಪ್ರೀತಿ ಹುಟ್ಟುವಂತೆ ಮಾಡಿ ನಿಮ್ಮ ಬಗ್ಗೆ ಹೆಚ್ಚಿನ ಗೌರವ ಮೂಡುವಂತೆ ಮಾಡಿ ಎಂದು ಅವರು ಹೇಳುತ್ತಾರೆ. ನಾವು ಮೆಚ್ಯೂರಿಟಿಯನ್ನು ಬೆಳಸಿಕೊಳ್ಳಬೇಕು. ನಮ್ಮ ಬುದ್ಧಿಮತ್ತೆ ಬೇರೆಯವರನ್ನು ಸುಲಭವಾಗಿ ಆಕರ್ಷಿಸುತ್ತದೆ. ನೀವು ಬುದ್ಧಿವಂತರಾಗಿ, ವಿವೇಚನೆಯಿಂದ ನಡೆದುಕೊಂಡರೆ ಮತ್ತು ನಿಮ್ಮ ಸಂಗಾತಿಗೆ ಭಾವನಾತ್ಮಕ ಬೆಂಬಲ ನೀಡಿದರೆ ಅದು ನಿಮ್ಮ ಬದುಕಿನ ಸ್ವರೂಪವನ್ನೇ ಬದಲಿಸುತ್ತದೆ ಎಂದು ಡಾ ಸೌಜನ್ಯ ಹೇಳುತ್ತಾರೆ.