ಕಿಂಗ್ ಕೊಹ್ಲಿ ಆರ್ಭಟಕ್ಕೆ 2 ವರ್ಷ: ಪಂದ್ಯ ಗೆದ್ದ ಬಳಿಕ ನಡೆದಿದ್ದೇನು? ಇಲ್ಲಿದೆ ವಿಡಿಯೋ
Virat Kohli: ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ವಿರಾಟ್ ಕೊಹ್ಲಿ ಆಡಿದ ಸರ್ವಶ್ರೇಷ್ಠ ಇನಿಂಗ್ಸ್ಗೆ ಇಂದು ಎರಡು ವರ್ಷ ತುಂಬಿದೆ. ಈ ಪಂದ್ಯದಲ್ಲಿ ಭಾರತ ತಂಡಕ್ಕೆ ಗೆಲುವು ತಂದುಕೊಟ್ಟ ಕಿಂಗ್ ಕೊಹ್ಲಿಗೆ ಸಿಕ್ಕ ಸ್ವಾಗತ ಹೇಗಿತ್ತು ಎಂಬುದರ ವಿಡಿಯೋ ಝಲಕ್ ಇಲ್ಲಿದೆ...
ಅದು 2022, ಅಕ್ಟೋಬರ್ 23… ಟಿ20 ವಿಶ್ವಕಪ್ನ 16ನೇ ಪಂದ್ಯ. ಮೆಲ್ಬೋರ್ನ್ನ ಎಂಸಿಜಿ ಸ್ಟೇಡಿಯಂನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಪಾಕ್ ಪಡೆಯನ್ನು ಬ್ಯಾಟಿಂಗ್ಗೆ ಆಹ್ವಾನಿಸಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 159 ರನ್ ಕಲೆಹಾಕಿತು. 160 ರನ್ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ 31 ರನ್ಗಳಿಸುಷ್ಟರಲ್ಲಿ ಕೆಎಲ್ ರಾಹುಲ್, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಹಾಗೂ ಅಕ್ಷರ್ ಪಟೇಲ್ ವಿಕೆಟ್ ಕಳೆದುಕೊಂಡಿತು. ಪವರ್ಪ್ಲೇನಲ್ಲೇ ಸಿಕ್ಕ ಈ ಯಶಸ್ಸುಗಳಿಂದ ಪಾಕ್ ಬೌಲರ್ಗಳು ಹಿರಿ ಹಿರಿ ಹಿಗ್ಗಿದ್ದರು. ಹೀಗೆ ಹಿಗ್ಗಿದ ಬೌಲರ್ಗಳಿಗೆ ಕೊನೆಯವರೆಗೂ ಆ ಒಂದು ವಿಕೆಟ್ ಪಡೆಯಲು ಸಾಧ್ಯವಾಗಲೇ ಇಲ್ಲ.
ಹೌದು, ಪಾಕ್ ಬೌಲರ್ಗಳ ಮುಂದೆ ಸೆಟೆದು ನಿಂತ ವಿರಾಟ್ ಕೊಹ್ಲಿ ಏಕಾಂಗಿಯಾಗಿ ಹೋರಾಟ ಮುಂದುವರೆಸಿದ್ದರು. ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ಗೆ ಒತ್ತು ನೀಡಿದ ಕೊಹ್ಲಿಗೆ ಹಾರ್ದಿಕ್ ಪಾಂಡ್ಯ ಸಾಥ್ ನೀಡಿದರು. ಪರಿಣಾಮ ಕೊನೆಯ 4 ಓವರ್ಗಳಲ್ಲಿ ಟೀಮ್ ಇಂಡಿಯಾಗೆ 54 ರನ್ಗಳ ಅವಶ್ಯಕತೆಯಿತ್ತು.
ಆದರೆ 17ನೇ ಓವರ್ನಲ್ಲಿ ನಸೀಮ್ ಶಾ ಕೇವಲ 6 ರನ್ ಮಾತ್ರ ನೀಡಿದ್ದರು. ಅದರಂತೆ ಕೊನೆಯ 18 ಎಸೆತಗಳಲ್ಲಿ ಭಾರತ ತಂಡವು 48 ರನ್ಗಳ ಗುರಿ ಪಡೆಯಿತು. ಶಾಹೀನ್ ಶಾ ಅಫ್ರಿದಿ ಎಸೆದ 18ನೇ ಓವರ್ನಲ್ಲಿ ವಿರಾಟ್ ಕೊಹ್ಲಿ 3 ಫೋರ್ಗಳೊಂದಿಗೆ ಒಟ್ಟು 17 ರನ್ ಕಲೆಹಾಕಿದರು.
ಹ್ಯಾರಿಸ್ ರೌಫ್ ಎಸೆದ 19ನೇ ಓವರ್ನ ಕೊನೆಯ ಎರಡು ಎಸೆತಗಳಲ್ಲಿ ವಿರಾಟ್ ಕೊಹ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿ 15 ರನ್ ಬಾರಿಸಿದರು. ಪರಿಣಾಮ ಕೊನೆಯ ಓವರ್ನಲ್ಲಿ ಟೀಮ್ ಇಂಡಿಯಾ 16 ರನ್ಗಳ ಗುರಿ ಪಡೆಯಿತು. ಮೊಹಮ್ಮದ್ ನವಾಝ್ ಎಸೆದ ಅಂತಿಮ ಓವರ್ನ ಮೊದಲ ಎಸೆತದಲ್ಲೇ ಹಾರ್ದಿಕ್ ಪಾಂಡ್ಯ (40) ಔಟಾದರು. ಇನ್ನು ಐದು ಎಸೆತಗಳಲ್ಲಿ 16 ರನ್ಗಳ ಅವಶ್ಯಕತೆ. 2ನೇ ಎಸೆತದಲ್ಲಿ ದಿನೇಶ್ ಕಾರ್ತಿಕ್ 1 ರನ್ ಕಲೆಹಾಕಿದರೆ, 3ನೇ ಎಸೆತದಲ್ಲಿ ವಿರಾಟ್ ಕೊಹ್ಲಿ 2 ರನ್ ಓಡಿದರು.
4ನೇ ಎಸೆತವು ನೋ ಬಾಲ್… ಈ ನೋ ಬಾಲ್ಗೆ ವಿರಾಟ್ ಕೊಹ್ಲಿ ಭರ್ಜರಿ ಸಿಕ್ಸ್ ಸಿಡಿಸಿದರು. ಮರು ಎಸೆತವು ವೈಡ್. ಮತ್ತೊಂದು ಎಸೆತದಲ್ಲಿ ವಿರಾಟ್ ಕೊಹ್ಲಿ ಬೌಲ್ಡ್ ಆದರೂ ಅದು ನೋ ಬಾಲ್ನ ಮರು ಎಸೆತವಾಗಿತ್ತು. ಹೀಗಾಗಿ ಕೊಹ್ಲಿ-ಡಿಕೆ ಮೂರು ರನ್ಗಳನ್ನು ಓಡಿದರು. 5ನೇ ಎಸೆತದಲ್ಲಿ ದಿನೇಶ್ ಕಾರ್ತಿಕ್ ಸ್ಟಂಪ್ ಔಟಾದರು.
ಕೊನೆಯ ಎಸೆತದಲ್ಲಿ ಭಾರತ ತಂಡಕ್ಕೆ ಗೆಲ್ಲಲು 2 ರನ್ಗಳ ಅವಶ್ಯಕತೆಯಿತ್ತು. ಆದರೆ ನವಾಝ್ ಎಸೆದ ಅಂತಿಮ ಎಸೆತ ಕೂಡ ವೈಡ್ ಆಯಿತು. ಇನ್ನು ಮರು ಎಸೆತದಲ್ಲಿ ರವಿಚಂದ್ರನ್ ಅಶ್ವಿನ್ ಒಂದು ರನ್ ಕಲೆಹಾಕುವ ಮೂಲಕ ಟೀಮ್ ಇಂಡಿಯಾಗೆ ರೋಚಕ ಜಯ ತಂದುಕೊಟ್ಟರು.
ಈ ಪಂದ್ಯದಲ್ಲಿ 53 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ ಅಜೇಯ 82 ರನ್ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ಗೆಲುವಿನ ರೂವಾರಿ ಎನಿಸಿಕೊಂಡರು. ಅದರಲ್ಲೂ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಗ್ರೆಟೆಸ್ಟ್ ಇನಿಂಗ್ಸ್ ಆಡಿದ ಹಿರಿಮೆಗೂ ಕಿಂಗ್ ಕೊಹ್ಲಿ ಪಾತ್ರರಾದರು. ವಿರಾಟ್ ಕೊಹ್ಲಿಯ ಈ ಸರ್ವಶ್ರೇಷ್ಠ ಇನಿಂಗ್ಸ್ಗೆ ಇಂದು 2 ವರ್ಷಗಳಾಗಿವೆ. ಈ ಅಮೋಘ ಗೆಲುವಿನ ಬಳಿಕ ಟೀಮ್ ಇಂಡಿಯಾದ ಸಂಭ್ರಮ ಹೇಗಿತ್ತು ಎಂಬುದರ ವಿಡಿಯೋವನ್ನು ಈ ಮೇಲೆ ನೀಡಲಾಗಿದೆ.