ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ 123 ಸ್ಥಾನ ಗೆಲ್ಲುವುದು ನಮ್ಮ ಗುರಿಯಾಗಿದೆ: ಕುಮಾರಸ್ವಾಮಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 13, 2022 | 10:38 PM

ಜನತಾ ಜಲಧಾರೆ ದೊಡ್ಡಮಟ್ಟದ ಯಶ ಕಂಡಿದೆ ಎಂದ ಕುಮಾರಸ್ವಾಮಿ ಅವರು ಜನತಾ ವಾಹಿನಿ ಕಳಶದ ವಾಹನಗಳು ಹೋದೆಡೆಯೆಲ್ಲ ಮಳೆಯಾಗಿದ್ದು ನಮಗೆ ಒಳ್ಳೆ ಶಕುನವಾಗಿ ಪರಿಣಮಿಸಿದೆ. ಅದು ಕಾಕತಾಳೀಯವೇ ಆಗಿರಬಹುದು, ಅದರೆ ಮಳೆ ನಮ್ಮ ಕಾರ್ಯಕರ್ತರ ಹುಮ್ಮಸನ್ನು ದ್ವಿಗುಣಗೊಳಿಸಿದೆ ಎಂದರು.

Ramanagara:  ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮತ್ತು ಜೆಡಿ(ಎಸ್) ನಾಯಕರು ನೆಲಮಂಗಲದಲ್ಲಿ ಆಯೋಜಿಸಿದ ಜನತಾ ಜಲಧಾರೆ ಕಾರ್ಯಕ್ರಮ (Janatha Jaladhare) ಬಾರಿ ಯಶ ಕಂಡಿದೆ ಎಂದು ಪಕ್ಷದ ಪ್ರಮುಖರು ಹೇಳುತ್ತಿದ್ದಾರೆ. ಶುಕ್ರವಾರ ನೆಲಮಂಗಲನಲ್ಲಿ ಸಮಾರೋಪ ಮತ್ತು ಸಂಕಲ್ಪ ಸಮಾರಂಭ ಏರ್ಪಡಿಸಲಾಗಿತ್ತು. ನೆಲಮಂಗಲಕ್ಕೆ ತೆರಳುವ ಮೊದಲು ಕುಮಾರಸ್ವಾಮಿ ಅವರು ರಾಮನಗರನಲ್ಲಿ (Ramanagara) ಸುದ್ದಿಗಾರರೊಂದಿಗೆ ಮಾತಾಡಿದರು. ಕಾಂಗ್ರೆಸ್ ಪಕ್ಷದ ಒಳಜಗಳದ ಬಗ್ಗೆ ಅವರ ಗಮನ ಸೆಳೆದಾಗ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಎಲ್ಲ ಪಕ್ಷಗಳಲ್ಲೂ ಇರುತ್ತವೆ, ಅವುಗಳನ್ನು ಆಗಿಂದಾಗ್ಗೆ ಇತ್ಯರ್ಥ ಮಾಡಿಕೊಳ್ಳಲಾಗುತ್ತದೆ. ಅದರೆ ಕಾಂಗ್ರೆಸ್ ನಲ್ಲಿರುವಷ್ಟು ದೊಡ್ಡ ಸಮಸ್ಯೆ ನಮ್ಮಲಿಲ್ಲ ಎಂದು ಅವರು ಹೇಳಿದರು.

ರಮ್ಯಾ ಅವರ ಟ್ವೀಟ್ ಸೃಷ್ಟಿಸಿರುವ ತಲ್ಲಣದ ಬಗ್ಗೆ ಕುಮಾರಸ್ವಾಮಿಯವರನ್ನು ಕೇಳಿದಾಗ ಬೇರೆ ಪಕ್ಷಗಳ ಸಮಸ್ಯೆ ಬಗ್ಗೆ ನಾನ್ಯಾಕೆ ಯೋಚಿಸಲಿ, ನನ್ನ ಗಮನವೆಲ್ಲ ಈಗ ಜನತಾ ಜಲಧಾರೆ ಸಮಾರೋಪ ಕಾರ್ಯಕ್ರಮದ ಮೇಲಿದೆ ಎಂದರು. ಸಭೆಯಲ್ಲಿ ಸುಮಾರು 4 ರಿಂದ ಲಕ್ಷ 5 ಜನ ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಜನತಾ ಜಲಧಾರೆ ದೊಡ್ಡಮಟ್ಟದ ಯಶ ಕಂಡಿದೆ ಎಂದ ಕುಮಾರಸ್ವಾಮಿ ಅವರು ಜನತಾ ವಾಹಿನಿ ಕಳಶದ ವಾಹನಗಳು ಹೋದೆಡೆಯೆಲ್ಲ ಮಳೆಯಾಗಿದ್ದು ನಮಗೆ ಒಳ್ಳೆ ಶಕುನವಾಗಿ ಪರಿಣಮಿಸಿದೆ. ಅದು ಕಾಕತಾಳೀಯವೇ ಆಗಿರಬಹುದು, ಅದರೆ ಮಳೆ ನಮ್ಮ ಕಾರ್ಯಕರ್ತರ ಹುಮ್ಮಸನ್ನು ದ್ವಿಗುಣಗೊಳಿಸಿದೆ ಎಂದರು.

ನಮ್ಮ ಗುರಿ ಒಂದು ಪಕ್ಕಾ ಕನ್ನಡತನದ ಸರ್ಕಾರವನ್ನು ರಚಿಸುವುದಾಗಿದೆ, ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ 123 ಸ್ಥಾನಗಳನ್ನು ಗೆಲ್ಲುವುದು ನಮ್ಮ ಗುರಿಯಾಗಿದೆ ಅಂತ ಹೇಳಿದಾಗ ಗೇಲಿ ಮಾಡಿದರು. ನಾನು ರೈತರ ಸಾಲಮನ್ನಾ ಮಾಡುವುದಾಗಿ ಹೇಳಿದಾಗಲೂ ಗೇಲಿ ಮಾಡಿದ್ದರು, ಅದರೆ ಎಲ್ಲ ಸವಾಲುಗಳನ್ನು ಹಿಮ್ಮೆಟ್ಟಿಸಿ ನಾವು ಅಧಿಕಾರಕ್ಕೆ ಬರುತ್ತೇವೆ ಉತ್ತಮ ಆಡಳಿತ ನೀಡುತ್ತೇವೆ ಎಂದು ಕುಮಾರಸ್ವಾಮಿ ಹೇಳಿದರು.

ಇದನ್ನೂ ಓದಿ:  ಜನತಾ ಜಲಧಾರೆ ಸಮಾರೋಪ ಸಮಾರಂಭ; 5 ಲಕ್ಷ ಜನರಿಗೆ ಊಟೋಪಚಾರ ವ್ಯವಸ್ಥೆ; ಖುದ್ದು ಹೆಚ್​ಡಿ ಕುಮಾರಸ್ವಾಮಿ ಪರಿಶೀಲನೆ