Video: ಬೆಂಗಳೂರಿನ ಪಣತ್ತೂರು ರಸ್ತೆ ದುರಸ್ತಿ ವಿಳಂಬ, ಟಿವಿ9 ರಿಯಾಲಿಟಿ ಚೆಕ್
ಪಣತ್ತೂರು ರಸ್ತೆಯ ದುರಸ್ತಿ ಕಾರ್ಯದಿಂದಾಗಿ ಕಳೆದ ಒಂದು ತಿಂಗಳಿನಿಂದ ರಸ್ತೆ ಬಂದ್ ಆಗಿದೆ. ಇದರಿಂದಾಗಿ ಸವಾರರು ಮಣ್ಣಿನ ರಸ್ತೆಯಲ್ಲಿ, ಸರ್ವಿಸ್ ರಸ್ತೆಗಳಲ್ಲಿ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಡುಬೀಸನಹಳ್ಳಿ-ಪಣತ್ತೂರು ಮಾರ್ಗ, ಬಳಗೆರೆ, ಗುಂಜೂರು, ವರ್ತೂರು ಕಡೆಗೆ ತೆರಳುವವರು ತೀವ್ರ ಸಂಚಾರ ದಟ್ಟಣೆಯನ್ನು ಎದುರಿಸುತ್ತಿದ್ದಾರೆ. ಟಿವಿ9 ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ರಸ್ತೆಗಳ ದುಸ್ಥಿತಿ ಬಯಲಾಗಿದೆ.
ಬೆಂಗಳೂರು, ನ.8: ಪಣತ್ತೂರು ರಸ್ತೆಯ ದುಸ್ಥಿತಿ (Panathur road problem) ಮತ್ತು ಸ್ಥಳೀಯರಿಗೆ ಉಂಟಾಗುತ್ತಿರುವ ಸಂಚಾರ ಸಮಸ್ಯೆಯ ಕುರಿತು ಟಿವಿ9 ಕನ್ನಡ ರಿಯಾಲಿಟಿ ಚೆಕ್ ನಡೆಸಿದೆ. ರಸ್ತೆ ದುರಸ್ತಿ ಕಾಮಗಾರಿಯಿಂದಾಗಿ ಪಣತ್ತೂರು ರಸ್ತೆ ಕಳೆದ ಒಂದು ತಿಂಗಳಿನಿಂದ ಸಂಪೂರ್ಣವಾಗಿ ಬಂದ್ ಆಗಿದೆ. ಇದರಿಂದ ಪ್ರತಿದಿನ ಕಾಡುಬೀಸನಹಳ್ಳಿ-ಪಣತ್ತೂರು ಮಾರ್ಗದಲ್ಲಿ ಸಂಚರಿಸುವ ಸವಾರರು ಮಣ್ಣಿನ ರಸ್ತೆಗಳಲ್ಲಿ ಹರಸಾಹಸ ಪಡುತ್ತಿದ್ದಾರೆ. ಈ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಕೂಡ ನಡೆಯುತ್ತಿದೆ. ನೆಟ್ಟಿಗರು ವಿಡಿಯೋವನ್ನು ಕೂಡ ಹಂಚಿಕೊಂಡಿದ್ದು, ಇದು ಬೆಂಗಳೂರಿನ ರಸ್ತೆಗಳು ದುಸ್ಥಿತಿ ಎಂದು ಟೀಕಿಸಿದ್ದರು. ಇನ್ನು ಕೆಲವರು ಇದನ್ನು ಬೆಂಗಳೂರಿನಲ್ಲಿ ಹೊಸದಾಗಿ ‘ಡರ್ಟ್ ಬೈಕ್’ ರೈಡ್ ಸಾಹಸ ಎಂದು ವ್ಯಂಗ್ಯವಾಡಿದ್ದಾರೆ. ಬೆಳ್ಳಂದೂರಿನ ರೈಲ್ವೆ ನಿಲ್ದಾಣದ ಸರ್ವಿಸ್ ರಸ್ತೆ ಸೇರಿದಂತೆ ಪರ್ಯಾಯ ಮಾರ್ಗಗಳಲ್ಲೂ ದುರಸ್ತಿ ಕಾರ್ಯಗಳು ನಡೆಯುತ್ತಿವೆ. ಇದರಿಂದಾಗಿ ಬೈಕ್ ಸವಾರರು ಮಣ್ಣಿನ ರಸ್ತೆಗಳಲ್ಲಿ ಹೆಣಗಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಬಳಗೆರೆ, ಗುಂಜೂರು ಮತ್ತು ವರ್ತೂರು ಕಡೆಗೆ ತೆರಳುವ ಪ್ರಯಾಣಿಕರು ಪೀಕ್ ಅವರ್‌ಗಳಲ್ಲಿ ಗಂಟೆಗಟ್ಟಲೆ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ಸರಿಯಾದ ಪರ್ಯಾಯ ಮಾರ್ಗಗಳ ವ್ಯವಸ್ಥೆ ಇಲ್ಲದಿರುವುದು ಮತ್ತು ರಸ್ತೆ ಕಾಮಗಾರಿ ವಿಳಂಬವಾಗುತ್ತಿರುವುದರಿಂದ ಇಲ್ಲಿನ ಸಂಚಾರ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಟಿವಿ9 ತನ್ನ “ಏನ್ ರೂಡು ಗುರು” ಅಭಿಯಾನದ ಮೂಲಕ ಈ ಗಂಭೀರ ಸಮಸ್ಯೆಯನ್ನು ಬೆಳಕಿಗೆ ತಂದಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

