ಲೋಕಸಭಾ ಚುನಾವಣೆ ಫಲಿತಾಂಶ; ನನ್ನಿಂದ ಚಿಕಿತ್ಸೆ ಪಡೆದವರ ಪ್ರೀತಿ-ಅಭಿಮಾನ ವೋಟುಗಳಲ್ಲಿ ಪರಿವರ್ತನೆಯಾಗಿದೆ: ಡಾ ಮಂಜುನಾಥ್
ಲೋಕಸಭಾ ಚುನಾವಣೆ ಫಲಿತಾಂಶ: ಕೇಂದ್ರದ ಹೊಸ ಸರ್ಕಾರದಲ್ಲಿ ತಾವು ಆರೋಗ್ಯ ಸಚಿವನಾದರೆ, ಆಯುಷ್ಮಾನ್ ಭಾರತ್ ಯೋಜನೆಗೆ ಮತ್ತಷ್ಟ್ಟು ಕಾಯಕಲ್ಪ ನೀಡುವುದರ ಜೊತೆಗೆ ಗ್ರಾಮೀಣ ಭಾಗಗಳ ಆಸ್ಪತ್ರೆಗಳಲ್ಲಿ ಮೂಲಭೂತ ಸೌಕರ್ಯಗಳು ಮತ್ತು ಮಾನವ ಸಂಪನ್ಮೂಲಗಳನ್ನು ಹೆಚ್ಚಿಸುವ ಕಡೆ ಗಮನ ನೀಡುವುದಾಗಿ ಹೇಳಿದರು.
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಖ್ಯಾತ ಹೃದ್ರೋಗ ತಜ್ಞ (cardiologist) ಡಾ ಸಿಎನ್ ಮಂಜುನಾಥ್ (Dr CN Manjunath) ಒಂದು ಅರ್ಹ ಗೆಲುವಿನತ್ತ ಸಾಗಿದ್ದಾರೆ. ನಗರದ ಮತ ಎಣಿಕೆ ಕೇಂದ್ರವೊಂದರ ಬಳಿ ಟಿವಿ9 ಪ್ರತಿನಿಧಿಯೊಂದಿಗೆ ಮಾತಾಡಿದ ಅವರಿಗೆ ರಾಜ್ಯದ ಉಪ ಮುಖ್ಯಮಂತ್ರಿಯ ಸಹೋದರ ಮತ್ತು ನಾಲ್ಕನೇ ಬಾರಿಗೆ ಆಯ್ಕೆ ಬಯಸಿದ್ದ ಡಿಕೆ ಸುರೇಶ್ (DK Suresh) ವಿರುದ್ಧ ಗೆಲುವು ಸಾಧಿಸುವುದು ಸುಲಭವಾಗಿರಲಿಲ್ಲ. ತಮ್ಮ ಗೆಲುವಿಗೆ ಕಾರಣವಾದ ಸಂಗತಿಗಳ ಬಗ್ಗೆ ಮಾತಾಡಿದ ಡಾಕ್ಟರ್ ಮಂಜುನಾಥ್, ಕಳೆದ 40 ವರ್ಷಗಳಿಂದ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಹೃದ್ರೋಗ ಪರಿಣಿತನಾಗಿ ಲಕ್ಷಾಂತರ ಜನಕ್ಕೆ ಚಿಕಿತ್ಸೆ ಒದಗಿಸಿದ್ದು ನೆರವಿಗೆ ಬಂದಿದೆ. ಗ್ರಾಮಾಂತರ ಕ್ಷೇತ್ರದ ಪ್ರತಿ ಹಳ್ಳಿಯಲ್ಲಿ ತನ್ನಿಂದ ಚಿಕಿತ್ಸೆ ಪಡೆದ 15-20 ಜನ ಸಿಗುತ್ತಿದ್ದರು, ಅವರಲ್ಲಿ ಡಾಕ್ಟರ್ ಅನ್ನು ಗೆಲ್ಲಿಸಬೇಕೆಂಬ ಆಸೆಯಿತ್ತು ಮತ್ತು ಅದು ಮತಗಳಲ್ಲಿ ಪರಿವರ್ತನೆಯಾಯಿತು ಎಂದು ಮಂಜುನಾಥ್ ಹೇಳಿದರು. ಕೆಲವು ಊರುಗಳಲ್ಲಿ ಜನ ನಾವು ಇದುವರೆಗೆ ನಿದ್ರೆಯಲ್ಲಿದ್ದೆವು ಈಗ ಜಾಗೃತರಾಗಿದ್ದೇವೆ ಅಂತ ತಮ್ಮ ಪರವಾಗಿ ಮತ ಚಲಾಯಿಸಿದ್ದಾರೆ ಎಂದು ಅವರು ಹೇಳಿದರು. ಕೇಂದ್ರದ ಹೊಸ ಸರ್ಕಾರದಲ್ಲಿ ತಾವು ಆರೋಗ್ಯ ಸಚಿವನಾದರೆ, ಆಯುಷ್ಮಾನ್ ಭಾರತ್ ಯೋಜನೆಗೆ ಮತ್ತಷ್ಟ್ಟು ಕಾಯಕಲ್ಪ ನೀಡುವುದರ ಜೊತೆಗೆ ಗ್ರಾಮೀಣ ಭಾಗಗಳ ಆಸ್ಪತ್ರೆಗಳಲ್ಲಿ ಮೂಲಭೂತ ಸೌಕರ್ಯಗಳು ಮತ್ತು ಮಾನವ ಸಂಪನ್ಮೂಲಗಳನ್ನು ಹೆಚ್ಚಿಸುವ ಕಡೆ ಗಮನ ನೀಡುವುದಾಗಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬೆಂಗಳೂರು: ಬಿಜೆಪಿ ಕಚೇರಿಗೆ ಇಂದು ಅನಿರೀಕ್ಷಿತ ಭೇಟಿ ನೀಡಿದಾಗಲೂ ಡಾ ಸಿಎನ್ ಮಂಜುನಾಥ್ ಟೈ ಧರಿಸಿದ್ದರು!