ಕೇರಳ ತಂಡದ ಗೆಲುವಿನ ಹಿಂದಿದೆ ಒಂದು ಕರಾಳ ಕಥೆ..!
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ರಣಜಿ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಗುಜರಾತ್ ತಂಡದ ವಿರುದ್ಧ ಕೇರಳ ತಂಡ ಜಯ ಸಾಧಿಸಿದೆ. ಅದು ಕೂಡ ಕೇವಲ 2 ರನ್ಗಳ ಮುನ್ನಡೆಯೊಂದಿಗೆ. ಅಂದರೆ ರಣಜಿ ಟೂರ್ನಿಯ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ಡ್ರಾ ಆದರೆ ಮೊದಲ ಇನಿಂಗ್ಸ್ನಲ್ಲಿ ಮುನ್ನಡೆ ಸಾಧಿಸಿದ ತಂಡಗಳನ್ನು ವಿಜಯಿ ಎಂದು ಘೋಷಿಸಲಾಗುತ್ತದೆ.
ನವೆಂಬರ್ 25, 2014 ಕ್ರಿಕೆಟ್ ಅಂಗಳದ ಕರಾಳ ದಿನ. ಈ ದಿನದಂದು ಆಸ್ಟ್ರೇಲಿಯಾದಲ್ಲಿ ನಡೆದ ದೇಶೀಯ ಟೂರ್ನಿಯ ಪಂದ್ಯದ ವೇಳೆ ಶಾನ್ ಅಬಾಟ್ ಎಸೆದ ಚೆಂಡು ಫಿಲ್ ಹ್ಯೂಸ್ ಅವರ ತಲೆಯ ಹಿಂಭಾಗಕ್ಕೆ ತಾಗಿತ್ತು. ತಕ್ಷಣವೇ ಕುಸಿದು ಬಿದ್ದಿದ್ದ ಫಿಲಿಪ್ ಹ್ಯೂಸ್ ಕೋಮಾಕ್ಕೆ ಜಾರಿದ್ದರು. ಇದಾಗಿ 2 ದಿನಗಳ ನಂತರ ಅವರು ಆಸ್ಪತ್ರೆಯಲ್ಲಿ ನಿಧನರಾಗಿದ್ದರು.
ಈ ನಿಧನದ ಬಳಿಕ ಕ್ರಿಕೆಟ್ನಲ್ಲಿ ಹೆಲ್ಮೆಟ್ ನಿಯಮವನ್ನು ಮತ್ತಷ್ಟು ಕಠಿಣಗೊಳಿಸಲಾಯಿತು. ಅದರಲ್ಲೂ ಚೆಂಡು ಹೆಲ್ಮೆಟ್ಗೆ ತಾಗಿದರೆ ವೈದ್ಯಕೀಯ ಪರಿಶೀಲನೆ ಅತ್ಯಗತ್ಯ ಎಂಬ ನಿಯಮವನ್ನು ಜಾರಿಗೊಳಿಸಲಾಯಿತು. ಇದರ ಜೊತೆಗೆ ಕ್ಲೋಸ್-ಇನ್ ಫೀಲ್ಡರ್ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಲಾಯಿತು. ಅಲ್ಲದೆ ಹೆಲ್ಮೆಟ್ಗೆ ಚೆಂಡು ಬಡಿದು ಕ್ಯಾಚ್, ಸ್ಟಂಪ್ಡ್ ಅಥವಾ ರನೌಟ್ ಆಗುವುದನ್ನು ಸಹ ಕಾನೂನುಬದ್ಧಗೊಳಿಸಲಾಯಿತು. ಬ್ಯಾಟರ್ ಹತ್ತಿರ ನಿಲ್ಲುವ ಫೀಲ್ಡರ್ಗಳು ಹೆಲ್ಮೆಟ್ ಬಳಸುವುದನ್ನು ಹೆಚ್ಚಿಸಲೆಂದೇ ಹಳೆಯ ನಿಯಮದಲ್ಲಿ ಬದಲಾವಣೆ ತರಲಾಯಿತು.
ಅದರಂತೆ 2023 ರಲ್ಲಿ ಸ್ಟಂಪ್‌ಗಳ ಬಳಿ ನಿಲ್ಲುವ ವಿಕೆಟ್‌ಕೀಪರ್‌ಗಳು ಮತ್ತು ಬ್ಯಾಟರ್‌ನ ಹತ್ತಿರವಿರುವ ಫೀಲ್ಡರ್‌ಗಳಿಗೆ (ಸ್ಲಿಪ್ಸ್ ಫೀಲ್ಡರ್‌ಗಳನ್ನು ಹೊರತುಪಡಿಸಿ) ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ. ಅಲ್ಲದೆ ಹೆಲ್ಮೆಟ್ಗೆ ಚೆಂಡು ತಾಗಿ ಕ್ಯಾಚ್, ಸ್ಟಂಪ್ಡ್ ಅಥವಾ ರನೌಟ್ ಆದರೆ ಅದನ್ನು ಔಟ್ ಎಂದು ಪರಿಗಣಿಸಲಾಗುವ ನಿಯಮವನ್ನು ಜಾರಿಗೊಳಿಸಲಾಗಿದೆ.
ಫಿಲ್ ಹ್ಯೂಸ್ ಅವರ ನಿಧನದಿಂದಾಗಿ ಬದಲಾದ ಈ ನಿಯಮವೇ ರಣಜಿ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಕೇರಳ ತಂಡದ ಕೈ ಹಿಡಿದಿದೆ. ಏಕೆಂದರೆ ಅಹಮದಾಬಾದ್ನಲ್ಲಿ ನಡೆದ ರಣಜಿ ಟೂರ್ನಿ ಸೆಮಿಫೈನಲ್ ಪಂದ್ಯದಲ್ಲಿ ಕೇರಳ ಮತ್ತು ಗುಜರಾತ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡದ ಕೇರಳ ತಂಡವು ಮೊದಲ ಇನಿಂಗ್ಸ್ನಲ್ಲಿ 457 ರನ್ ಪೇರಿಸಿತು.
ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆಡಿದ ಗುಜರಾತ್ ತಂಡವು 9 ವಿಕೆಟ್ ಕಳೆದುಕೊಂಡು 455 ರನ್ ಕಲೆಹಾಕಿತ್ತು. ಅತ್ತ ಪಂದ್ಯವು ಕೊನೆಯ ದಿನದಾಟಕ್ಕೆ ಕಾಲಿಟ್ಟಿದ್ದರಿಂದ ಗುಜರಾತ್ ತಂಡಕ್ಕೆ ಮುನ್ನಡೆ ಅತ್ಯವಶ್ಯಕವಾಗಿತ್ತು. ಏಕೆಂದರೆ ರಣಜಿ ಟೂರ್ನಿಯ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ಡ್ರಾ ಆದರೆ ಮೊದಲ ಇನಿಂಗ್ಸ್ನಲ್ಲಿ ಮುನ್ನಡೆ ಸಾಧಿಸಿದ ತಂಡಗಳನ್ನು ವಿಜಯಿ ಎಂದು ಘೋಷಿಸಲಾಗುತ್ತದೆ.
ಇತ್ತ ಡ್ರಾನತ್ತ ಸಾಗಿದ್ದ ಈ ಪಂದ್ಯದ ಮೂಲಕ ಫೈನಲ್ಗೇರಲು ಗುಜರಾತ್ ತಂಡ ಮೊದಲ ಇನಿಂಗ್ಸ್ನಲ್ಲಿ ಕೇವಲ ಮೂರು ರನ್ಗಳ ಮುನ್ನಡೆಗಳಿಸಿದ್ದರೆ ಸಾಕಿತ್ತು. ಈ ಹಂತದಲ್ಲಿ ಗುಜರಾತ್ ಬ್ಯಾಟರ್ ಅರ್ಝಾನ್ ನಾಗಸ್ವಲ್ಲಾ ಬಾರಿಸಿದ ಚೆಂಡು ನೇರವಾಗಿ ಶಾರ್ಟ್ ಲೆಗ್‌ನಲ್ಲಿ ಫೀಲ್ಡಿಂಗ್ನಲ್ಲಿದ್ದ ಸಲ್ಮಾನ್ ನಿಝಾರ್ ಅವರ ಹೆಲ್ಮೆಟ್ಗೆ ಬಡಿದಿದೆ. ಹೆಲ್ಮೆಟ್ಗೆ ತಾಗಿ ಗಾಳಿಯಲ್ಲಿ ಹಾರಿದ ಚೆಂಡು ನೇರವಾಗಿ ಸ್ಲಿಪ್ನಲ್ಲಿದ್ದ ಸಚಿನ್ ಬೇಬಿ ಅವರ ಕೈ ಸೇರಿದೆ.
ಅಂತಿಮ ವಿಕೆಟ್ ಸಿಕ್ಕ ಖುಷಿಯಲ್ಲಿ ಕೇರಳ ತಂಡದ ಫೀಲ್ಡರ್ಗಳು ಸಂಭ್ರಮಿಸಲಾರಂಭಿಸಿದರು. ಇದಾಗ್ಯೂ ಫೀಲ್ಡ್ ಅಂಪೈರ್ ಔಟ್ ನೀಡಿರಲಿಲ್ಲ. ಆ ಬಳಿಕ ಅಂಪೈರ್ಗಳು ನಿಯಮಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಫಿಲ್ ಹ್ಯೂಸ್ ಸಾವಿನ ಬಳಿಕ ಹೆಲ್ಮೆಟ್ ನಿಯಮದಲ್ಲಿ ಬದಲಾವಣೆ ಮಾಡಲಾಗಿರುವುದು ಕಂಡು ಬಂದಿದೆ. ಈ ನಿಯಮದಂತೆ ಫೀಲ್ಡ್ ಅಂಪೈರ್ ಔಟ್ ನೀಡಿದ್ದಾರೆ.
ಅಲ್ಲಿಗೆ ಗುಜರಾತ್ ತಂಡದ ಮೊದಲ ಇನಿಂಗ್ಸ್ 455 ರನ್ಗಳಿಗೆ ಅಂತ್ಯಗೊಂಡಿತು. ಇದರೊಂದಿಗೆ ಕೇರಳ ತಂಡವು ಮೊದಲ ಇನಿಂಗ್ಸ್ನಲ್ಲಿ ಕೇವಲ 2 ರನ್ಗಳ ಮುನ್ನಡೆ ಪಡೆಯಿತು. ಈ ಅತ್ಯಲ್ಪ ಮುನ್ನಡೆಯೊಂದಿಗೆ ಕೇರಳ ತಂಡವು 74 ವರ್ಷಗಳ ಬಳಿಕ ರಣಜಿ ಟೂರ್ನಿಯ ಫೈನಲ್ಗೇರುವಲ್ಲಿ ಯಶಸ್ವಿಯಾಗಿದೆ. ಅದು ಸಹ ಕ್ರಿಕೆಟ್ ಅಂಗಳದ ಕರಾಳ ಘಟನೆಯಿಂದಾಗಿ ಬದಲಾದ ನಿಯಮದಿಂದ ಎಂಬುದೇ ವಿಶೇಷ.