ಬೆಂಗಳೂರು ಟ್ರಾಫಿಕ್ ಬಗ್ಗೆ ಮೆಟ್ರೋ ಪ್ರಯಾಣದ ವೇಳೆ ಡಿಕೆಶಿ ಜತೆ ಮೋದಿ ಅನೌಪಚಾರಿಕ ಮಾತುಕತೆ: ಸಿಎಂಗೆ ಮಹತ್ವದ ಸಲಹೆ ಕೊಟ್ಟ ಪಿಎಂ
ಬೆಂಗಳೂರಿನ ಪಿಂಕ್ ಲೈನ್ ಮೆಟ್ರೋ ಉದ್ಘಾಟನಾ ಸಮಾರಂಭದ ವೇಳೆ ಪ್ರಧಾನಿ ಮೋದಿ ಅನೌಪಚಾರಿಕವಾಗಿ ಸಂಚಾರ ದಟ್ಟಣೆ ಕುರಿತು ಚರ್ಚಿಸಿದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಚಿವ ಕೃಷ್ಣಭೈರೇಗೌಡ ಅವರೊಂದಿಗೆ ಮಾತನಾಡಿದ ಮೋದಿ, ಸಮಯ ನಿರ್ವಹಣೆ, ಶಾಪಿಂಗ್ ಕಲ್ಚರ್, ಪಾರ್ಕಿಂಗ್ ನೀತಿ ಮತ್ತು ಮೆಟ್ರೋ ವಿಸ್ತರಣೆಗೆ ಸಂಬಂಧಿಸಿದಂತೆ ಪರಿಹಾರಗಳನ್ನು ಸೂಚಿಸಿದರು.
ಬೆಂಗಳೂರು, ನವೆಂಬರ್ 14: ಬೆಂಗಳೂರಿನ ಪಿಂಕ್ ಲೈನ್ ಮೆಟ್ರೋ ಉದ್ಘಾಟನೆ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅನೌಪಚಾರಿಕವಾಗಿ ನಗರದ ಸಂಚಾರ ದಟ್ಟಣೆ ಸಮಸ್ಯೆಯ ಕುರಿತು ಚರ್ಚಿಸಿದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಅವರೊಂದಿಗೆ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವಾಗ ಈ ಮಾತುಕತೆ ನಡೆಯಿತು. ಈ ಹಿಂದೆ ತಾವು ಬೆಂಗಳೂರಿಗೆ ಪಕ್ಷದ ಕೆಲಸಕ್ಕೆ ಬಂದಾಗ ಇಷ್ಟು ಪ್ರಮಾಣದ ಟ್ರಾಫಿಕ್ ಇರಲಿಲ್ಲ. ಈಗ ನಗರದಲ್ಲಿ ಟ್ರಾಫಿಕ್ ಸಮಸ್ಯೆ ವಿಪರೀತವಾಗಿದೆ ಎಂದು ಮೋದಿ ಅಭಿಪ್ರಾಯಪಟ್ಟರು. ಸಂಚಾರ ದಟ್ಟಣೆ ನಿವಾರಣೆಗೆ ಅವರು ಕೆಲವು ಸಲಹೆಗಳನ್ನು ನೀಡಿದರು. ಶಾಲೆಗಳು, ಸರ್ಕಾರಿ ಕಚೇರಿಗಳು ಮತ್ತು ಕಂಪನಿಗಳು ಒಂದೇ ಸಮಯದಲ್ಲಿ ಆರಂಭವಾಗುವುದರಿಂದ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚುತ್ತದೆ. ಇದನ್ನು ತಪ್ಪಿಸಲು, ಶಾಲಾ-ಕಚೇರಿಗಳ ಸಮಯವನ್ನು ಬದಲಾಯಿಸುವ ಕುರಿತು ಯೋಚಿಸುವಂತೆ ಅವರು ಸಲಹೆ ನೀಡಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.
ಜೊತೆಗೆ, ಶಾಪಿಂಗ್ ಮಾಲ್‌ಗಳು ಮತ್ತು ಬೀದಿಗಳನ್ನು ರಾತ್ರಿಯ ವೇಳೆಯಲ್ಲೂ ತೆರೆದಿಡಲು ಸೂಚಿಸಿದರು. ಬೆಂಗಳೂರಿನಂತಹ ನಗರದಲ್ಲಿ ಭದ್ರತೆ ಉತ್ತಮವಾಗಿರುವುದರಿಂದ, ಸುರಕ್ಷತಾ ಕ್ರಮಗಳೊಂದಿಗೆ ರಾತ್ರಿ ಪಾಳಿ ವ್ಯಾಪಾರಕ್ಕೆ ಅವಕಾಶ ನೀಡಿದರೆ ದಟ್ಟಣೆ ಕಡಿಮೆ ಆಗಬಹುದು ಎಂದು ಹೇಳಿದರು. ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಈ ಪ್ರಯೋಗ ಯಶಸ್ವಿಯಾಗಿತ್ತು ಎಂದು ಮೋದಿ ನೆನಪಿಸಿಕೊಂಡರು. ವೈಜ್ಞಾನಿಕ ಪಾರ್ಕಿಂಗ್ ನೀತಿಯ ಅಗತ್ಯತೆ ಮತ್ತು ಮೆಟ್ರೋ ಜಾಲವನ್ನು ಮತ್ತಷ್ಟು ವಿಸ್ತರಿಸುವ ಮಹತ್ವವನ್ನೂ ಅವರು ಒತ್ತಿ ಹೇಳಿದರು ಎಂದು ಮೂಲಗಳು ತಿಳಿಸಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

