T20 World Cup: 40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ; ಹೇಳಿದ್ದೇನು?

Updated on: Feb 22, 2026 | 8:28 PM

Mann Ki Baat: ಪ್ರಧಾನಿ ಮೋದಿ ತಮ್ಮ 'ಮನ್ ಕಿ ಬಾತ್'ನ 131ನೇ ಸಂಚಿಕೆಯಲ್ಲಿ, T20 ವಿಶ್ವಕಪ್‌ನಲ್ಲಿ ಭಾರತೀಯ ಮೂಲದ 40 ಆಟಗಾರರನ್ನು ಶ್ಲಾಘಿಸಿದರು. ಕೆನಡಾ, ಯುಎಸ್‌ಎ ಮತ್ತು ಓಮನ್ ತಂಡಗಳಲ್ಲಿನ ದಿಲ್‌ಪ್ರೀತ್ ಬಾಜ್ವಾ, ಮೋನಾಂಕ್ ಪಟೇಲ್, ಸೌರಭ್ ನೇತ್ರವಲ್ಕರ್ ಅವರಂತಹ ಆಟಗಾರರು ಜಾಗತಿಕ ಕ್ರಿಕೆಟ್ ಗುಣಮಟ್ಟ ಹೆಚ್ಚಿಸುತ್ತಿದ್ದಾರೆಂದು ಹೆಮ್ಮೆ ವ್ಯಕ್ತಪಡಿಸಿದರು. 2026ರಲ್ಲಿ ಇನ್ನಷ್ಟು ಭಾರತೀಯ ಮೂಲದ ಆಟಗಾರರನ್ನು ನೋಡುವ ವಿಶ್ವಾಸ ವ್ಯಕ್ತಪಡಿಸಿದರು.

ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ನ 131ನೇ ಸಂಚಿಕೆಯಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್​ನಲ್ಲಿ ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದರು. ಈ ಪಂದ್ಯಾವಳಿಯಲ್ಲಿ ಭಾರತೀಯ ಮೂಲದ 40 ಆಟಗಾರರು ವಿವಿಧ ತಂಡಗಳನ್ನು ಪ್ರತಿನಿಧಿಸಿದರು. ಈ ಬಗ್ಗೆ ಮಾತನಾಡಿದ ಮೋದಿ, 2026 ರ ಟಿ20 ವಿಶ್ವಕಪ್​ನಲ್ಲಿ ಹಲವಾರು ಭಾರತೀಯ ಮೂಲದ ಆಟಗಾರರು ಪಂದ್ಯಾವಳಿಯಲ್ಲಿ ಭಾಗವಹಿಸುವುದನ್ನು ನೋಡುವುದು ತಮಗೆ ಹೆಮ್ಮೆ ತಂದಿದೆ ಎಂದರು.

ನೀವೆಲ್ಲರೂ ಈ ದಿನಗಳಲ್ಲಿ ಟಿ20 ವಿಶ್ವಕಪ್ ವೀಕ್ಷಿಸುತ್ತಿರಬೇಕು. ಈ ಪಂದ್ಯಾವಳಿಯಲ್ಲಿ ಬೇರೆ ಬೇರೆ ತಂಡಗಳಲ್ಲಿ ಆಡುತ್ತಿರುವ ಕೆಲವು ಆಟಗಾರರ ಹೆಸರನ್ನು ಕೇಳಿದಾಗ ನಿಮಗೆ ಇವರು ಭಾರತದ ಮೂಲದವರು ಎಂಬುದು ನಿಮ್ಮ ಅರಿವಿಗೆ ಬರುತ್ತದೆ. ಕೆನಡಾ ತಂಡವು ಭಾರತೀಯ ಮೂಲದ ಅತಿ ಹೆಚ್ಚು ಆಟಗಾರರನ್ನು ಹೊಂದಿದೆ. ತಂಡದ ನಾಯಕ ದಿಲ್‌ಪ್ರೀತ್ ಬಾಜ್ವಾ ಗುರುದಾಸ್ಪುರದವರು. ನವನೀತ್ ಧಲಿವಾಲ್ ಚಂಡೀಗಢದವರು. ಭಾರತವನ್ನು ಹೆಮ್ಮೆಪಡುವಂತೆ ಮಾಡಿದ ಅಂತಹ ಆಟಗಾರರ ದೀರ್ಘ ಪಟ್ಟಿ ಇದೆ.

ಯುಎಸ್ಎ ತಂಡದಲ್ಲಿ ನಾಯಕ ಮೋನಾಂಕ್ ಪಟೇಲ್, ಸೌರಭ್ ನೇತ್ರವಲ್ಕರ್ ಮತ್ತು ಹರ್‌ಪ್ರೀತ್ ಸಿಂಗ್ ಸೇರಿದಂತೆ ಭಾರತದ ದೇಶೀಯ ಕ್ರಿಕೆಟ್‌ನ ಅನೇಕ ಪ್ರತಿಭಾನ್ವಿತ ಆಟಗಾರರು ಇದ್ದಾರೆ. ಓಮನ್ ತಂಡದಲ್ಲಿರುವ ಹಲವಾರು ಭಾರತೀಯ ಮೂಲದ ಆಟಗಾರರ ಬಗ್ಗೆಯೂ ಪ್ರಧಾನಿ ಪ್ರಸ್ತಾಪಿಸಿದರು, ಇತರ ದೇಶಗಳಲ್ಲಿ ಕ್ರಿಕೆಟ್ ಗುಣಮಟ್ಟವನ್ನು ಹೆಚ್ಚಿಸಲು ಅವರು ಕೊಡುಗೆ ನೀಡುತ್ತಿರುವ ರೀತಿಗೆ ಹೆಮ್ಮೆ ವ್ಯಕ್ತಪಡಿಸಿದರು.