ತಮ್ಮ ಮನವಿಗೆ ಬೆಲೆ ಕೊಟ್ಟು ಕಡಿಮೆ ಚಿನ್ನ ಖರೀದಿಸಿದ ಜನರಿಗೆ ಪ್ರಧಾನಿ ಮೋದಿ ಮೆಚ್ಚುಗೆ

Updated on: Nov 22, 2026 | 11:02 AM

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಗಗನಕ್ಕೇರಿರುವ ಹಿನ್ನೆಲೆಯಲ್ಲಿ, ಚಿನ್ನದ ಖರೀದಿಯನ್ನು ಕಡಿಮೆ ಮಾಡುವಂತೆ ತಾವು ನೀಡಿದ್ದ ಕರೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ದೇಶದ ನಾಗರಿಕರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಜನರ ಈ ಸಂಯಮ ಮತ್ತು ಜಾಗೃತಿಯಿಂದಾಗಿ ದೇಶದ ಆರ್ಥಿಕತೆಗೆ ಹಾಗೂ ವಿದೇಶಿ ವಿನಿಮಯ ಮೀಸಲಿಗೆ ದೊಡ್ಡ ಮಟ್ಟದ ಅನುಕೂಲವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಜಾಗತಿಕ ಅನಿಶ್ಚಿತತೆ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ತೀವ್ರವಾಗಿ ಏರಿಕೆಯಾದ ಸಂದರ್ಭದಲ್ಲಿ ಭಾರತೀಯರು ಅನಗತ್ಯವಾಗಿ ಚಿನ್ನ ಖರೀದಿಸುವುದನ್ನು ಕಡಿಮೆ ಮಾಡಿದ್ದಾರೆ ಎಂದು ಹೇಳಿದರು. ವಿಶೇಷವಾಗಿ ಹಬ್ಬಗಳು ಮತ್ತು ಶುಭ ಸಮಾರಂಭಗಳ ಸಮಯದಲ್ಲೂ ಜನರು ಸಾಂಪ್ರದಾಯಿಕ ಚಿನ್ನದ ಖರೀದಿಯ ಬದಲು ವಿವೇಚನೆಯಿಂದ ವರ್ತಿಸಿರುವುದು ಶ್ಲಾಘನೀಯ ಎಂದರು.

ನವದೆಹಲಿ, ನವೆಂಬರ್ 22: ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಗಗನಕ್ಕೇರಿದ್ದ ಸಂದರ್ಭದಲ್ಲಿ, ಚಿನ್ನದ ಖರೀದಿಯನ್ನು ಕಡಿಮೆ ಮಾಡುವಂತೆ ತಾವು ನೀಡಿದ್ದ ಸಲಹೆಗೆ ದೇಶದ ನಾಗರಿಕರು ಅಭೂತಪೂರ್ವವಾಗಿ ಸ್ಪಂದಿಸಿದ್ದಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಐತಿಹಾಸಿಕ ಕರೆಯನ್ನು ಸ್ಮರಿಸಿದ ಪ್ರಧಾನಿ ಮೋದಿ, “1965ರ ಭಾರತ-ಪಾಕಿಸ್ತಾನ ಯುದ್ಧ ಮತ್ತು ಆಹಾರದ ಕೊರತೆಯ ಸಂದರ್ಭದಲ್ಲಿ ಅಂದಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ದೇಶದ ಜನತೆಗೆ ವಾರಕ್ಕೆ ಒಂದು ಹೊತ್ತಿನ ಊಟವನ್ನು ತ್ಯಜಿಸುವಂತೆ ಕರೆ ನೀಡಿದ್ದರು. ಶಾಸ್ತ್ರಿ ಅವರ ಮಾತಿಗೆ ಓಗೊಟ್ಟು ಕೋಟ್ಯಂತರ ಭಾರತೀಯರು ಉಪವಾಸ ಆಚರಿಸಿದ್ದರು. ಇಂದಿಗೂ ದೇಶದ ಆರ್ಥಿಕ ಹಿತದೃಷ್ಟಿಯಿಂದ ಕರೆ ನೀಡಿದಾಗ ಜನರು ಅದೇ ರೀತಿಯ ರಾಷ್ಟ್ರಪ್ರೇಮ ಮತ್ತು ಶಿಸ್ತನ್ನು ತೋರಿಸುತ್ತಿದ್ದಾರೆ. ದಶಕಗಳ ಹಿಂದೆ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಒಂದು ಕರೆಗೆ ಇಡೀ ದೇಶವೇ ಹೇಗೆ ಒಗ್ಗಟ್ಟಾಗಿ ನಿಂತಿತ್ತೋ, ಇಂದಿಗೂ ಭಾರತದ ಜನರಲ್ಲಿ ಅದೇ ಸಂಸ್ಕಾರ ಮತ್ತು ದೇಶಭಕ್ತಿಯ ಗುಣವಿದೆ. ಸರ್ಕಾರದ ಒಂದು ಸಲಹೆಯನ್ನು ದೇಶದ ಹಿತದೃಷ್ಟಿಯಿಂದ ಪಾಲಿಸುವ ಮೂಲಕ ಜನರು ತಮ್ಮ ಜವಾಬ್ದಾರಿಯನ್ನು ಮೆರೆದಿದ್ದಾರೆ” ಎಂದು ಹೇಳಿದರು.

ಜಾಗತಿಕ ಅನಿಶ್ಚಿತತೆಯ ನಡುವೆ ಚಿನ್ನದ ದರ ಏರಿಕೆಯಾದಾಗ, ಅನಗತ್ಯವಾಗಿ ಚಿನ್ನ ಖರೀದಿಸುವುದನ್ನು ನಿಲ್ಲಿಸುವಂತೆ ಅಥವಾ ಮುಂದೂಡುವಂತೆ ತಾವು ಮಾಡಿದ್ದ ಮನವಿಯನ್ನು ಜನರು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಮೋದಿ ತಿಳಿಸಿದರು. ಭಾರತವು ತನ್ನ ಅಗತ್ಯದ ಬಹುಪಾಲು ಚಿನ್ನವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುವುದರಿಂದ, ಜನರ ಈ ಸಂಯಮವು ಚಿನ್ನದ ಆಮದು ಹೊರೆಯನ್ನು ತಗ್ಗಿಸಿದೆ ಮತ್ತು ದೇಶದ ವಿದೇಶಿ ವಿನಿಮಯ ಮೀಸಲನ್ನು ರಕ್ಷಿಸಲು ನೆರವಾಗಿದೆ. ಇಂದು ಚಿನ್ನದ ಬೆಲೆ ಕಡಿಮೆಯಾಗಲು ಭಾರತದ ಜನರೇ ಕಾರಣ ಎಂದು ಮೋದಿ ಹೇಳಿದರು.

ಪ್ರಧಾನಿ ಮೋದಿಯ ಮನವಿ ಏನಾಗಿತ್ತು?:

ಈ ಹಿಂದೆ, ಜಾಗತಿಕ ಮಟ್ಟದಲ್ಲಿ ಚಿನ್ನದ ಬೆಲೆ ದಾಖಲೆಯ ಮಟ್ಟಕ್ಕೆ ಏರಿದ್ದಾಗ, ದೇಶದ ಆರ್ಥಿಕ ಹಿತದೃಷ್ಟಿಯಿಂದ ಮತ್ತು ಬೆಲೆ ಇಳಿಕೆಯಾಗುವವರೆಗೆ ಅನಗತ್ಯವಾಗಿ ಚಿನ್ನ ಖರೀದಿಯನ್ನು ಮುಂದೂಡುವಂತೆ ಪ್ರಧಾನಿ ಮೋದಿ ನಾಗರಿಕರಿಗೆ ಮನವಿ ಮಾಡಿದ್ದರು. ಇದಕ್ಕೆ ದೇಶವ್ಯಾಪಿ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More