ಕಾಶಿ ವಿಶ್ವನಾಥ ಕಾರಿಡಾರ್ ಸಂಕೀರ್ಣವನ್ನು ಉದ್ಘಾಟಿಸುವ ಮೊದಲು ಪ್ರಧಾನಿ ಮೋದಿ ಶಿವನ ಆಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು

ಕಾಶಿ ವಿಶ್ವನಾಥ ಕಾರಿಡಾರ್ ಸಂಕೀರ್ಣವನ್ನು ಉದ್ಘಾಟಿಸುವ ಮೊದಲು ಪ್ರಧಾನಿ ಮೋದಿ ಶಿವನ ಆಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 13, 2021 | 7:58 PM

ಕಾಶಿ ವಿಶ್ವನಾಥ ದೇವಸ್ಥಾನ ಈಗ ಸಂಪೂರ್ಣವಾಗಿ ಹೊಸ ರೂಪ ತಳೆದಿದ್ದು ಅಲ್ಲಿ ನಿಂತರೆ ಹರಿಯುವ ಗಂಗೆಯ ವಿಹಂಗಮ ದೃಶ್ಯ ಲಭ್ಯವಾಗುತ್ತದೆ.

ಶಿವನ ಅತ್ಯಂತ ಪ್ರೀತಿಯ ವಾದ್ಯ ಡಮರುಗದ ಸದ್ದು ಮತ್ತು ನಿರಂತರ ಮಂತ್ರಗಳ ಉದ್ಘೋಷಣೆ ನಡುವೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸೋಮವಾವರದಂದು, ವಿಶ್ವ ಪ್ರಸಿದ್ಧ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಪೂಜೆ ಮತ್ತು ಅಭಿಷೇಕದ ನಂತರ ಪ್ರಧಾನಿಗಳು ಕಾಶಿ ವಿಶ್ವನಾಥ ಕಾರಿಡಾರ್ ಸಂಕೀರ್ಣವನ್ನು ಉದ್ಘಾಟಿಸಿದರು. ಅದಕ್ಕೆ ಮೊದಲು ಪ್ರಧಾನಿ ಮೋದಿ ಅವರು, ಲಲಿತಾ ಘಾಟ್ ಬಳಿ ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿ ನದಿ ನೀರನ್ನು ಕಲಶವೊಂದರಲ್ಲಿ ತುಂಬಿಕೊಂಡು ವಿಶ್ವನಾಥನ ದೇವಸ್ಥಾನಕ್ಕೆ ನಡೆದು ಹೋದರು.

ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಗಳನ್ನು ಪೂರ್ಣಗೊಳಿಸಿದ ನಂತರ ಪ್ರಧಾನಿಯವರು ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯನ್ನು ನಿಗದಿತ ಸಮಯದಲ್ಲಿ ಪೂರೈಸಿದ ಕರ್ಮಯೋಗಿಗಳ ಮೇಲೆ ಹೂವಿನ ಪಕಳೆಗಳನ್ನು ಸುರಿದು ಅಭಿನಂದಿಸಿದರು.

ಅವರೊಂದಿಗೆ ಕೆಮೆರಾಗಳಿಗೆ ಪೋಸು ನೀಡಿದ ನಂತರ ಪ್ರಧಾನಿ ಮೋದಿ ದೇವಸ್ಥಾನದ ಸಂಕೀರ್ಣದಲ್ಲಿ ಸಸಿಯೊಂದನ್ನು ನೆಟ್ಟರು. ಪ್ರಧಾನಿಯವರ ಮಹತ್ವಾಕಾಂಕ್ಷೆ ಮತ್ತು ಕನಸಿನ ರೂ. 339 ಕೋಟಿ ವೆಚ್ಚದ ಪ್ರಾಜೆಕ್ಟ್ ಕೇವಲ ಎರಡೂವರೆ ವರ್ಷಗಳಲ್ಲಿ ಪೂರ್ಣಗೊಂಡಿದೆ.

ಕಾಶಿ ವಿಶ್ವನಾಥ ದೇವಸ್ಥಾನ ಈಗ ಸಂಪೂರ್ಣವಾಗಿ ಹೊಸ ರೂಪ ತಳೆದಿದ್ದು ಅಲ್ಲಿ ನಿಂತರೆ ಹರಿಯುವ ಗಂಗೆಯ ವಿಹಂಗಮ ದೃಶ್ಯ ಲಭ್ಯವಾಗುತ್ತದೆ. ನಿಮಗೆ ಗೊತ್ತಿರುವ ಹಾಗೆ ದೇವಸ್ಥಾನವು ಮೊದಲು ವಾರಣಾಸಿಯ ಕಿರಿದಾದ ರಸ್ತೆಗಳಿಂದ ಆವೃತಗೊಂಡಿದ್ದ ಸ್ಥಳದಲ್ಲಿತ್ತು ಮತ್ತು ಭಕ್ತರಿಗೆ ಹಾಗೂ ಪ್ರವಾಸಿಗರಿಗೆ ಅಲ್ಲಿಗೆ ತಲುಪುವುದೇ ದೊಡ್ಡ ಸಮಸ್ಯೆಯಾಗಿತ್ತು.

ಭಕ್ತರ ಸಂಖ್ಯೆ ಜಾಸ್ತಿಯಿದ್ದಾಗ ಗುಡಿಗೆ ಹೋಗಿ ವಿಶ್ವನಾಥನ ದರ್ಶನ ಪಡೆಯುವುದು ಮತ್ತೂ ಕಷ್ಟವಾಗುತಿತ್ತು. ಉಲ್ಲೇಖಿಸಬಹುದಾದ ಮತ್ತೊಂದು ಸಂಗತಿಯೇನೆಂದರೆ, ಆಗ ದೇವಸ್ಥಾನದಲ್ಲಿ ನಿಂತರೆ ಗಂಗಾ ನದಿ ಕಾಣುತ್ತಿರಲಿಲ್ಲ.

ಈಗ ಸುಮಾರು 25 ಅಡಿ ಅಗಲದ ರಸ್ತೆ ನದಿಯ ಮೇಲ್ಭಾಗದ ಲಲಿತಾ ಘಾಟ್ ಮತ್ತು ದೇವಸ್ಥಾನ ಸಂಕೀರ್ಣದಲ್ಲಿರುವ ಮಂದಿರ ಚೌಕ್ ಗೆ ಸಂಪರ್ಕ ಕಲ್ಪಿಸುತ್ತದೆ. ಭಕ್ತರು ಇನ್ನು ಶಿವನ ಮಂದಿರ ಮುಂದೆಯೇ ಗಂಗೆಯಲ್ಲಿ ಪವಿತ್ರ ಸ್ನಾನ ಮಾಡಿ ದೇವರಿಗೆ ಪೂಜೆ ಸಲ್ಲಿಸಬಹುದು.

ಇತಿಹಾಸದ ಪುಟಗಳನ್ನು ತಿರುವಿದ್ದೇಯಾದರೆ, ಕಾಶಿ ವಿಶ್ವನಾಥನ ದೇವಾಲಯ ಮೊದಲ ಬಾರಿಗೆ 1194 ರಲ್ಲಿ ಕೆಡವಲ್ಪಟ್ಟಿತ್ತು ಮತ್ತು 1447 ರಲ್ಲಿ ಜುವಾನಪುರದ ಸುಲ್ತಾನ್ ಮಹ್ಮದ್ ಶಾನ ಆಡಳಿತದಲ್ಲಿ ಮಂದಿರದ ಮೇಲೆ ಮತ್ತೊಮ್ಮೆ ಆಕ್ರಮಣ ನಡೆದಿತ್ತು.

ಇದನ್ನೂ ಓದಿ:  Shocking Video: ತನಗೆ ಮತ ಹಾಕದ ಯುವಕರಿಗೆ ಬಸ್ಕಿ ಹೊಡೆಸಿ, ಎಂಜಲು ನೆಕ್ಕಿಸಿದ ರಾಜಕಾರಣಿ; ಶಾಕಿಂಗ್ ವಿಡಿಯೋ ಇಲ್ಲಿದೆ