ಮೈಸೂರು ಮಹಾರಾಜರ ಬಗ್ಗೆ ಹೇಳಿಕೆ ವಿವಾದ: ಸಚಿವ ಯತೀಂದ್ರ ವಿರುದ್ಧ ಪೋಸ್ಟ್ ಕಾರ್ಡ್ ಅಭಿಯಾನ
ರಾಜಮನೆತನದ ಕುರಿತ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ವಿರೋಧಿಸಿ ಮೈಸೂರಿನಲ್ಲಿ ಪೋಸ್ಟ್‌ಕಾರ್ಡ್ ಅಭಿಯಾನ ಶುರುವಾಗಿದೆ. ಮೈಸೂರು ಮಹಾರಾಜರ ಕೊಡುಗೆಗಳನ್ನು ತಿಳಿಸುವ ಉದ್ದೇಶದಿಂದ ಅವರ ಬೆಂಗಳೂರು ಕಚೇರಿಗೆ ಅಂಚೆ ಕಾರ್ಡ್‌ಗಳನ್ನು ಕಳುಹಿಸಲಾಗುತ್ತಿದೆ. ಸಚಿವರು ಕ್ಷಮೆ ಯಾಚಿಸಿ ರಾಜೀನಾಮೆ ನೀಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಮೈಸೂರು, ಅಕ್ಟೋಬರ್ 30: ಮೈಸೂರಿನಲ್ಲಿ ದಸರಾ ದಂಗಲ್ ಮುಂದುವರಿದಿದ್ದು, ಮಹಾರಾಜರ ಬಗ್ಗೆ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ವಿರುದ್ಧ ಪೋಸ್ಟ್‌ಕಾರ್ಡ್ ಅಭಿಯಾನ ಆರಂಭಿಸಲಾಗಿದೆ. ಮೈಸೂರು ಮಹಾರಾಜರ ಕುಟುಂಬ ಮತ್ತು ದೇವಸ್ಥಾನಗಳಿಗೆ ಅಪಾರ ಕೊಡುಗೆಗಳನ್ನು ನೀಡಿದೆ. ಈ ಕುರಿತು ಯತೀಂದ್ರ ಅವರಿಗೆ ಸರಿಯಾದ ಮಾಹಿತಿ ಇಲ್ಲದಿದ್ದರೆ, ಹಿರಿಯರನ್ನು ಕೇಳಿ ತಿಳಿದುಕೊಳ್ಳಲಿ ಎಂದು ಅಭಿಯಾನದ ಆಯೋಜಕರು ತಿಳಿಸಿದ್ದಾರೆ. ಈ ಅಭಿಯಾನದಲ್ಲಿ ಸಾರ್ವಜನಿಕರು ಯತೀಂದ್ರ ಅವರ ಬೆಂಗಳೂರಿನ ವಿಧಾನಸೌಧದ ಕಚೇರಿ ವಿಳಾಸಕ್ಕೆ ಪೋಸ್ಟ್‌ಕಾರ್ಡ್‌ಗಳನ್ನು ರವಾನಿಸುತ್ತಿದ್ದಾರೆ. ಪೋಸ್ಟ್‌ಕಾರ್ಡ್‌ಗಳಲ್ಲಿ ಮೈಸೂರು ಅರಸರು ನಾಡಿಗೆ ನೀಡಿದ ಕೊಡುಗೆಗಳು ಮತ್ತು ಸಾಧನೆಗಳನ್ನು ಪಟ್ಟಿ ಮಾಡಲಾಗಿದೆ. ಯತೀಂದ್ರ ಅವರ ಹೇಳಿಕೆಯು ರಾಜಮನೆತನಕ್ಕೆ ಮಾತ್ರವಲ್ಲದೆ, ಇಡೀ ಮೈಸೂರಿಗರಿಗೂ ನೋವುಂಟು ಮಾಡಿದೆ ಎಂದು ದೂರಲಾಗಿದೆ. ತಮ್ಮ ಹೇಳಿಕೆ ಬಗ್ಗೆ ಯತೀಂದ್ರ ರಾಜಮನೆತನದವರಿಗೆ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಮತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಲಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
