ಬಿಜೆಪಿ ಮೈತ್ರಿ ನಂಗೆ ಮುಖ್ಯ ಅಲ್ಲ; ಶಾಕಿಂಗ್ ಹೇಳಿಕೆ ಕೊಟ್ಟ ಕುಮಾರಸ್ವಾಮಿ

|

Updated on: May 03, 2024 | 5:51 PM

HD Kumaraswamy Says Alliance with BJP Not Important Now: ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ ಕುಮಾರಸ್ವಾಮಿಗೆ ತಲೆ ನೋವು ತಂದಿದೆ. ತನ್ನ ಅಣ್ಣನ ಮಗನ ಕೃತ್ಯಗಳನ್ನು ನಿರಾಕರಿಸದ ಕುಮಾರಸ್ವಾಮಿ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ ಎಂದು ಹೇಳುತ್ತಿದ್ದಾರೆ. ಹಾಗೆಯೇ, ಬಿಜೆಪಿ ಜೊತೆಗಿನ ಮೈತ್ರಿ ಅಪಾಯದಲ್ಲಿದೆಯಾ ಎಂಬ ಪತ್ರಕರ್ತರ ಪ್ರಶ್ನೆಗೆ ಕುಮಾರಸ್ವಾಮಿ, ತಮಗೆ ಬಿಜೆಪಿ ಮೈತ್ರಿ ಮುಖ್ಯ ಅಲ್ಲ. ಮೊದಲು ಪ್ರಜ್ವಲ್ ಪ್ರಕರಣ ಇತ್ಯರ್ಥ ಆಗಲಿ ಎಂದಿದ್ದಾರೆ.

ರಾಯಚೂರು, ಮೇ 3: ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ತಲೆ ಬಿಸಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD Kumaraswamy), ಬಿಜೆಪಿಯೊಂದಿಗಿನ ಮೈತ್ರಿ ಉಳಿಸಿಕೊಳ್ಳುವ ಉತ್ಸಾಹ ಕಳೆದುಕೊಂಡಿದ್ದಾರೆ. ಬಿಜೆಪಿ ಮೈತ್ರಿ ಹೋದರೂ ಪರವಾಗಿಲ್ಲ ಎನ್ನುವಂತಹ ಮಾತನ್ನು ಕುಮಾರಸ್ವಾಮಿ ರಾಯಚೂರಿನಲ್ಲಿ ಆಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಳಿಕ ಬಿಜೆಪಿ ಮೈತ್ರಿ ಏನಾಗಬಹುದು ಎಂದು ಕೇಳಲಾದ ಪ್ರಶ್ನೆಗೆ ಕುಮಾರಸ್ವಾಮಿ, ತನಗೆ ಮೈತ್ರಿ ಮುಖ್ಯ ಅಲ್ಲ ಎಂದು ಹೇಳಿದ್ದಾರೆ.

ಪ್ರಜ್ವಲ್ ಪ್ರಕರಣದ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಇದೆಲ್ಲಾ ಕಾಲ ನಿರ್ಧಾರ ಮಾಡುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು. ತಾವು ಪಲಾಯನವಾದ ಮಾಡಲ್ಲ. ಪ್ರಜ್ವಲ್ ಪ್ರಕರಣ ಬೆಳಕಿಗೆ ಬಂದಾಗ ಇದು ಮಾರ್ಫಿಂಗ್ ವಿಡಿಯೋ ಎಂದು ಹೇಳಿದೆವಾ? ಯಾರೆ ತಪ್ಪು ಮಾಡಿದ್ದರೂ ಶಿಕ್ಷೆ ಆಗಲಿ ಎಂದು ಧೈರ್ಯವಾಗಿ ಹೇಳಿದ್ದೇವೆ. ತನಿಖೆ ಆಗಲಿ, ತಪ್ಪಿತಸ್ಥರು ಯಾರೆಂದು ಗೊತ್ತಾಗಲಿ ಎಂದು ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಪ್ರಕರಣಲ್ಲಿ ದೇವೇಗೌಡ ಮತ್ತು ನನ್ನ ವಿರುದ್ಧ ಯಾಕೆ ಮೀಡಿಯ ಟ್ರಯಲ್? ಹೆಚ್ ಡಿ ಕುಮಾರಸ್ವಾಮಿ

ಈ ಪ್ರಕರಣವನ್ನು ಇಟ್ಟುಕೊಂಡು ಪಾಪ ಆ ದೇವೇಗೌಡರ ವರ್ಚಸ್ಸನ್ನು ಕುಂದಿಸಲು ಪ್ರಯತ್ನಿಸುತ್ತಿದ್ದಾರೆ. ಇದು ಸಾಧ್ಯವಾಗಲ್ಲ. ದೇವರು ನನ್ನ ಹಣೆಯಲ್ಲಿ ಏನು ಬರೆದಿದ್ದಾನೋ ಅದನ್ನು ಕಿತ್ತುಕೊಳ್ಳಲು ನಿಮ್ಮಿಂದ ಆಗಲ್ಲ ಎಂದು ಕುಮಾರಸ್ವಾಮಿ ಗುಡುಗಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow us on