ಪ್ರಜ್ವಲ್ ರೇವಣ್ಣ ಜೈಲು ಸ್ಥಳಾಂತರಕ್ಕೆ ಟ್ವಿಸ್ಟ್: ಅರ್ಧದಲ್ಲೇ ವಾಹನ ಹಿಂದಿರುಗಲು ಪ್ರಭಾವಿ ವ್ಯಕ್ತಿ ಕರೆಯೇ ಕಾರಣ!
ಪ್ರಜ್ವಲ್ ರೇವಣ್ಣ ಅವರನ್ನು ಪರಪ್ಪನ ಅಗ್ರಹಾರದಿಂದ ಹಿಂಡಲಗಾ ಜೈಲಿಗೆ ಸ್ಥಳಾಂತರಿಸುವ ಪ್ರಯತ್ನಕ್ಕೆ ಅನಿರೀಕ್ಷಿತ ತಿರುವು ದೊರೆತಿದೆ. ತುಮಕೂರು ದಾಟಿ ಶಿರಾವರೆಗೂ ತಲುಪಿದ್ದ ವಾಹನ, ಒಬ್ಬ ಪ್ರಭಾವಿ ವ್ಯಕ್ತಿಯ ಕರೆಯಿಂದಾಗಿ ವಾಪಸ್ ಕರೆಸಲ್ಪಟ್ಟಿದೆ. ರಾಜಕೀಯವಾಗಿ ವಿರೋಧ ಪಕ್ಷಗಳಿಗೆ ಅಸ್ತ್ರವಾಗಬಾರದು ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಮಾಹಿತಿ ‘ಟಿವಿ9’ಗೆ ದೊರಕಿದೆ.
ಬೆಂಗಳೂರು, ಅಕ್ಟೋಬರ್ 12: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬೆಳಗಾವಿಯ ಹಿಂಡಲಗಾ ಜೈಲಿಗೆ ಪ್ರಜ್ವಲ್ ರೇವಣ್ಣರನ್ನು ಸ್ಥಳಾಂತರಿಸುವ ಪ್ರಕ್ರಿಯೆಗೆ ಅನಿರೀಕ್ಷಿತ ತಿರುವು ಸಿಕ್ಕಿದೆ. ಸ್ಥಳಾಂತರದ ಸಿದ್ಧತೆಗಳು ಪೂರ್ಣಗೊಂಡ ನಂತರ ಪ್ರಜ್ವಲ್ ಅವರನ್ನು ಕರೆದೊಯ್ಯುತ್ತಿದ್ದ ವಾಹನ ಬೆಂಗಳೂರಿನಿಂದ ಹೊರಟು ತುಮಕೂರು ದಾಟಿ ಶಿರಾವರೆಗೂ ತಲುಪಿತ್ತು. ಆದರೆ, ಈ ಸಂದರ್ಭದಲ್ಲಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರಿಗೆ ಒಬ್ಬ ಪ್ರಭಾವಿ ವ್ಯಕ್ತಿಯಿಂದ ದೂರವಾಣಿ ಕರೆ ಬಂದಿದೆ. ಕರೆಯ ಸೂಚನೆಯ ಮೇರೆಗೆ, ಪ್ರಜ್ವಲ್ ಅವರನ್ನು ಬೆಳಗಾವಿಗೆ ಕರೆದೊಯ್ಯುತ್ತಿದ್ದ ವಾಹನವನ್ನು ತಕ್ಷಣವೇ ವಾಪಸ್ ಕರೆಸುವಂತೆ ಆದೇಶ ನೀಡಲಾಗಿದೆ. ಈ ಆದೇಶದ ಅನ್ವಯ, ಪ್ರಜ್ವಲ್ ರೇವಣ್ಣ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಮರಳಿ ಕರೆತರಲಾಗಿದೆ.
ಈ ದಿಢೀರ್ ಬದಲಾವಣೆಗೆ ರಾಜಕೀಯ ಕಾರಣಗಳನ್ನು ನೀಡಲಾಗುತ್ತಿದೆ. ಪ್ರಜ್ವಲ್ ರೇವಣ್ಣ ಸ್ಥಳಾಂತರವು ವಿರೋಧ ಪಕ್ಷಗಳಿಗೆ ರಾಜಕೀಯ ಅಸ್ತ್ರವಾಗಬಹುದು ಮತ್ತು ಅನಗತ್ಯ ವಿವಾದಕ್ಕೆ ಕಾರಣವಾಗಬಹುದು ಎಂಬ ಆತಂಕದಿಂದ ಪ್ರಭಾವಿ ವಲಯದಿಂದ ಈ ಸೂಚನೆ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
