ಕುಂಭಮೇಳ: ಚಿಕ್ಕಬಳ್ಳಾಪುರದ ವ್ಯಕ್ತಿ ಕಾಲ್ತುಳಿತದಿಂದ ಬಚಾವ್ ಆಗಿದ್ದೇ ರೋಚಕ, ವಿಡಿಯೋ ನೋಡಿ
ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಕೋಟ್ಯಾಂತರ ಭಕ್ತರು ಭಾಗವಹಿಸುತ್ತಿದ್ದಾರೆ. ಕರ್ನಾಟಕದಿಂದಲೂ ಅನೇಕ ಭಕ್ತರು ತೆರಳಿದ್ದಾರೆ. ಮೌನಿ ಅಮವಾಸ್ಯೆಯಂದು ತ್ರಿವೇಣಿ ಸಂಗಮದಲ್ಲಿ ಸಂಭವಿಸಿದ ಕಾಲ್ತುಳಿತದಿಂದ ಹಲವರು ಗಾಯಗೊಂಡಿದ್ದಾರೆ. ಚಿಕ್ಕಬಳ್ಳಾಪುರ ಮತ್ತು ನೆಲಮಂಗಲದ ಭಕ್ತರು ತ್ರಿವೇಣಿ ಸಂಗಮದಲ್ಲಿ ಸಂಭವಿಸಿದ ಕಾಲ್ತುಳಿತದಿಂದ ಬಚಾವ್ ಆಗಿದ್ದು ಹೇಗೆ ಎಂಬುವುದನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.
ಪ್ರಯಾಗ್ರಾಜ್ನಲ್ಲಿ ಮಹಾಕುಂಭಮೇಳ ನಡೆಯುತ್ತಿದೆ. 144 ವರ್ಷಗಳಿಗೊಮ್ಮೆ ನಡೆಯುವ ಈ ಅಪರೂಪದ ಕುಂಭಮೇಳಕ್ಕೆ ಕೋಟಿ ಕೋಟಿ ಸಂಖ್ಯೆಯಲ್ಲಿ ಭಕ್ತರು ದಿನನಿತ್ಯ ಭೇಟಿ ನೀಡುತ್ತಿದ್ದಾರೆ. ಬುಧವಾರ ಮೌನಿ ಅಮವಾಸ್ಯೆ ಹಿನ್ನೆಲೆಯಲ್ಲಿ ಅಪರಾ ಸಂಖ್ಯೆಯಲ್ಲಿ ಭಕ್ತರು ತ್ರಿವೇಣಿ ಸಂಗಮಕ್ಕೆ ತೆರಳಿದ್ದಾರೆ. ಕರ್ನಾಟಕದಿಂದ ಕೂಡ ಅಸಂಖ್ಯ ಭಕ್ತರು ಕುಂಭಮೇಳದಲ್ಲಿ ಭಾಗಿಯಾಗಿದ್ದಾರೆ. ಕುಂಭಮೇಳದಲ್ಲಿ ಇಂದು ಸಂಭವಿಸಿದ ಕಾಲ್ತುಳಿತದಿಂದ 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಕುಂಭಮೇಳದಲ್ಲಿ ಚಿಕ್ಕಬಳ್ಳಾಪುರದ ನಾಲ್ಕು ಜನ ಮತ್ತು ನೆಲಮಂಗಲದ ಓರ್ವ ವ್ಯಕ್ತಿ ಭಾಗಿಯಾಗಿದ್ದು, ಕಾಲ್ತುಳಿತದಿಂದ ಬಚಾವ್ ಆಗಿದ್ದೇ ರೋಚಕವಾಗಿದೆ.
ಮಹಾಕುಂಭಮೇಳದಲ್ಲಿ ಭಾಗಿಯಾದ ಚಿಕ್ಕಬಳ್ಳಾಪುರದ ಶ್ರೀಧರ್ ಎಂ.ಎಸ್ ಮಾತನಾಡಿ, “ಪ್ರಯಾಗ್ರಾಜ್ ಮಹಾ ಕುಂಭಮೇಳದಲ್ಲಿ ಸ್ನಾನ ಮಾಡಲು 10 ಕಿಲೋ ಮೀಟರ್ ನಡೆಯಬೇಕಾಯಿತು. ಕುಂಭಮೇಳದಿಂದ ಹೊರ ಬರಲು 10 ಗಂಟೆ ಬೇಕಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರು. ನಾವು ಕಾಲ್ತುಳಿತ ಸ್ಥಳದಿಂದ ದೂರದಲ್ಲಿ ಇದ್ದೇವೆ” ಎಂದು ಹೇಳಿದರು.