ರಾಹುಲ್ ಬಿಜೆಪಿ ವಿರುದ್ಧ ಹೇಳಿಕೆ ನೀಡಿದ್ದೇ ವಿನಃ ಹಿಂದೂಗಳ ಕುರಿತಲ್ಲ; ಪ್ರಿಯಾಂಕಾ ಗಾಂಧಿ ಸ್ಪಷ್ಟನೆ

|

Updated on: Jul 01, 2024 | 5:54 PM

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಲೋಕಸಭಾ ಅಧಿವೇಶನದಲ್ಲಿ ಹಿಂದೂಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ಆರೋಪಿಸಿದ್ದು, ಅದಕ್ಕೆ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ತಮ್ಮ ಸಹೋದರ ರಾಹುಲ್ ಗಾಂಧಿ ಅವರನ್ನು ಬೆಂಬಲಿಸಿದ್ದಾರೆ.

ನವದೆಹಲಿ: ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಇಂದು ತಮ್ಮ ಮೊದಲ ಭಾಷಣ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಿಂದೂಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ ಮತ್ತು ಈ ಕುರಿತು ಕ್ಷಮೆ ಯಾಚಿಸುವಂತೆ ಒತ್ತಾಯಿಸಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕಾ ಗಾಂಧಿ, “ನನ್ನ ಸಹೋದರ ರಾಹುಲ್ ಗಾಂಧಿ ಎಂದಿಗೂ ಹಿಂದೂಗಳ ವಿರುದ್ಧ ಮಾತನಾಡುವುದಿಲ್ಲ. ಅವರು ಆರ್​ಎಸ್​ಎಸ್​ ಬಿಜೆಪಿ ನಾಯಕರ ಬಗ್ಗೆ ಮಾತನಾಡಿದ್ದಾರೆ. ಅದನ್ನು ಬಿಜೆಪಿ ನಾಯಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿದ್ದಾರೆ” ಎಂದು ಸ್ಪಷ್ಟಪಡಿಸಿದ್ದಾರೆ.

ರಾಹುಲ್ ಗಾಂಧಿ ಹೇಳಿದ್ದೇನು?:

ಇಂದು ಲೋಕಸಭೆಯಲ್ಲಿ ಶಿವನ ಫೋಟೋವನ್ನು ಹಿಡಿದು ಮಾತನಾಡಿದ್ದ ರಾಹುಲ್ ಗಾಂಧಿ, “ನಮ್ಮ ಮಹಾಪುರುಷರೆಲ್ಲರೂ ಅಹಿಂಸೆಯ ಬಗ್ಗೆ ಮಾತನಾಡಿದ್ದಾರೆ. ಆದರೆ ತಮ್ಮನ್ನು ತಾವು ಹಿಂದೂ ಎಂದು ಕರೆದುಕೊಳ್ಳುವವರು ಹಿಂಸೆ, ದ್ವೇಷ, ಅಸತ್ಯದ ಬಗ್ಗೆ ಮಾತ್ರ ಮಾತನಾಡುತ್ತಾರೆ. ನೀವು ಯಾವುದೇ ರೀತಿಯಲ್ಲಿ ಹಿಂದೂ ಅಲ್ಲ.” ಎಂದು ಬಿಜೆಪಿ ನಾಯಕರತ್ತ ಕೈ ತೋರಿಸಿ ಹೇಳಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಪ್ರಧಾನಿ ನರೇಂದ್ರ ಮೋದಿಯ, “ಇಡೀ ಹಿಂದೂ ಸಮುದಾಯವನ್ನು ಹಿಂಸಾತ್ಮಕ ಎಂದು ಕರೆಯುವುದು ಅತ್ಯಂತ ಗಂಭೀರವಾದ ಆರೋಪವಾಗಿದೆ” ಎಂದು ಹೇಳಿದ್ದರು.

ಅದಕ್ಕೆ ತಿರುಗುತ್ತರ ನೀಡಿದ್ದ ರಾಹುಲ್ ಗಾಂಧಿ, “ನಾನು ಪ್ರಧಾನಿ ಮೋದಿ, ಬಿಜೆಪಿ-ಆರ್‌ಎಸ್‌ಎಸ್​ ಹಿಂಸಾತ್ಮಕ ಧೋರಣೆ ತಳೆದಿದೆ ಎಂದು ಹೇಳಿದ್ದು. ಮೋದಿ, ಆರ್​ಎಸ್​ಎಸ್​, ಬಿಜೆಪಿ ಮಾತ್ರ ಹಿಂದೂ ಸಮುದಾಯವಲ್ಲ” ಎಂದು ತಿರುಗೇಟು ನೀಡಿದ್ದರು.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Jul 01, 2024 05:53 PM