ಎಮ್ ಈ ಎಸ್ ಸಂಘಟನೆಯನ್ನು ಸರ್ಕಾರ ನಿಷೇಧಿಸದಿದ್ದರೆ ಡಿಸೆಂಬರ್ 31 ರಂದು ಕನ್ನಡಪರ ಸಂಘಟನೆಗಳಿಂದ ‘ಕರ್ನಾಟಕ ಬಂದ್’!!
ಡಿಸೆಂಬರ್ 31 ರಂದು ನಡೆಯುವ ಪ್ರತಿಭಟನೆಯು ಪಕ್ಷಾತೀತವಾಗಿರಲಿದೆ, ಇದರಲ್ಲಿ ಎಲ್ಲ ರಾಜಕೀಯ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರು ಭಾಗವಹಿಸುತ್ತಾರೆ ಎಂದು ವಾಟಾಳ್ ನಾಗರಾಜ್ ಹೇಳಿದರು.
ನಾವು ಇದನ್ನು ಪದೇಪದೆ ಹೇಳುತ್ತಿದ್ದೇವೆ, ಮಹಾರಾಷ್ಟ್ರ ಏಕೀಕರಣ ಸಮಿತಿ (ಎಮ್ ಈ ಎಸ್) ಸದಸ್ಯರ ಪುಂಡಾಟದಿಂದ ಕನ್ನಡಿಗರು ರೊಚ್ಚಿಗೆದ್ದಿದ್ದಾರೆ. ಕನ್ನಡಪರ ಸಂಘಟನೆಗಳ ಒಕ್ಕೂಟ ಬುಧವಾರದಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಟಿಯೊಂದನ್ನು ನಡೆಸಿ ಡಿಸೆಂಬರ್ 31ರಂದು ಕರ್ನಾಟಕ ಬಂದ್ ನಡೆಸುವ ಘೋಷಣೆಯನ್ನು ಮಾಡಿದವು. ಈ ಸಂದರ್ಭದಲ್ಲಿ ಸಂಘಟನೆಗಳ ಅಧ್ಯಕ್ಷ ಮತ್ತು ಹಿರಿಯ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಅತ್ಯಂತ ಭಾವನಾತ್ಮಕ ಮತ್ತು ರೊಚ್ಚಿನಿಂದ ಮಾತಾಡಿ, ಈಗ ಆಚರಿಸಲಿರುವ ಬಂದ್ ಹಿಂದಿನ ಬಂದ್ಗಳಂತೆ ಅಲ್ಲ, ಪ್ರತಿಭಟನೆಯಲ್ಲಿ ಕನ್ನಡಿಗರ ಆತ್ಮ, ಹೃದಯ, ಉಸಿರು ಮತ್ತು ಶಕ್ತಿ ಒಳಗೊಂಡಿರುತ್ತದೆ ಎಂದರು.
ಡಿಸೆಂಬರ್ 31 ರಂದು ನಡೆಯುವ ಪ್ರತಿಭಟನೆಯು ಪಕ್ಷಾತೀತವಾಗಿರಲಿದೆ, ಇದರಲ್ಲಿ ಎಲ್ಲ ರಾಜಕೀಯ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರು ಭಾಗವಹಿಸುತ್ತಾರೆ ಎಂದು ವಾಟಾಳ್ ನಾಗರಾಜ್ ಹೇಳಿದರು. ನಾಯಕರು ಯಾವುದೇ ಪಕ್ಷದವರಾಗಿರಲಿ, ಬಂದ್ ವಿರುದ್ಧ ಮಾತಾಡಿ ಕನ್ನಡಿಗರ ಶಕ್ತಿ, ಸ್ಥೈರ್ಯ ಕುಂದಿಸುವ ಪ್ರಯತ್ನ ಮಾಡಬಾರದು ಎಂದು ಅವರು ಎಚ್ಚರಿಸಿದರು.
ಮಾಧ್ಯಮ, ಆಸ್ಪತ್ರೆ ಮತ್ತು ಎಲ ಅವಶ್ಯಕ ಸೇವೆಗಳು ಎಂದಿನಂತೆ ಜಾರಿಯಲ್ಲಿರಲಿವೆ, ಬಂದ್ ಅವುಗಳಿಗೆ ಅನ್ವಯಿಸದು ಎಂದು ವಾಟಾಳ್ ನಾಗರಾಜ್ ಹೇಳಿದರು.
ಹಾಗೆಯೇ, ವಾಟಾಳ್ ಅವರು ಮುಖ್ಯಮಂತ್ರಿಗಳಿಗೆ ಒಂದು ಸವಾಲನ್ನು ಸಹ ಎಸೆದರು. ಅವರ ಸರ್ಕಾರವೇನಾದರೂ ಡಿಸೆಂಬರ್ 31ರೊಳಗಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು ನಿಷೇಧಿಸಿದ್ದೇಯಾದರೆ, ಕನ್ನಡಪರ ಸಂಘಟನೆಗಳು ಪ್ರಸ್ತಾಪಿತ ಬಂದ್ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವುದಾಗಿ ಅವರು ಹೇಳಿದರು.
ಸರ್ಕಾರದ ಮೇಲೆ ಒತ್ತಡ ಹೆಚ್ಚುತ್ತಿದೆ. ಎಮ್ ಈ ಎಸ್ ವಿರುದ್ಧ ಅದು ಆದಷ್ಟು ಬೇಗ ನಿರ್ಧಾರ ತೆಗೆದುಕೊಳ್ಳಬೇಕಿದೆ.
ಇದನ್ನೂ ಓದಿ: ಮುಂದುವರಿದ ಎಮ್ಇಎಸ್ ಪುಂಡರ ಪುಂಡಾಟಿಕೆ! ಬಸ್ಗೆ ಎಮ್ಇಎಸ್ ಧ್ವಜ ಕಟ್ಟಿ, ಮಸಿ ಬಳಿದ ಪುಂಡರು; ವಿಡಿಯೋ ವೈರಲ್