ನೆಲಮಂಗಲದ ಮನೆಯೊಂದನ್ನು ಪ್ರವೇಶಿಸಿತು ಭಾರಿ ಗಾತ್ರದ ನಾಗರಹಾವು, ಉರಗ ತಜ್ಞರಿಂದ ಸುರಕ್ಷಿತವಾಗಿ ಅರಣ್ಯಪ್ರದೇಶಕ್ಕೆ ಹಾವಿನ ರವಾನೆ

ನೆಲಮಂಗಲದ ಮನೆಯೊಂದನ್ನು ಪ್ರವೇಶಿಸಿತು ಭಾರಿ ಗಾತ್ರದ ನಾಗರಹಾವು, ಉರಗ ತಜ್ಞರಿಂದ ಸುರಕ್ಷಿತವಾಗಿ ಅರಣ್ಯಪ್ರದೇಶಕ್ಕೆ ಹಾವಿನ ರವಾನೆ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Dec 22, 2021 | 6:52 PM

ಮನೆಯವರು ಒಂದು ಬುದ್ಧಿವಂತಿಕೆಯ ಕೆಲಸ ಮಾತ್ರ ಮಾಡಿದ್ದಾರೆ. ನಾಗರಾಜನನ್ನು ತಡವುವ ಪ್ರಯತ್ನ ಮಾಡದೆ ಅದರ ಪಾಲಿಗೆ ಅದನ್ನು ಬಿಟ್ಟು ಅದೇ ಊರಲ್ಲಿರುವ ಉರಗ ತಜ್ಞರೊಬ್ಬರಿಗೆ ಫೋನ್ ಮಾಡಿ ಕರೆಸಿಕೊಂಡಿದ್ದಾರೆ.

ಮೈಯಲ್ಲಿ ನಡುಕ ಹುಟ್ಟಿಸುವ ಗಾತ್ರದ ಮನೆಯೊಳಗೆ ಬಂದು ಬಿಟ್ಟರೆ ಹೇಗೆ ಮಾರಾಯ್ರೇ? ಅಂಥ ಒಂದು ಘಟನೆ ಬುಧವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲಕ್ಕೆ ಹತ್ತಿರದ ಊರಿನಲ್ಲಿ ನಡೆದಿದೆ. ಭಾರಿ ಗಾತ್ರದ ನಾಗರಹಾವು ಅದು. ಎದೆ ಝಲ್ ಎನಿಸುವಷ್ಟು ದೊಡ್ಡ ಹಾವು! ನೀವೇ ನೋಡಿ. ಈ ಮನೆಗೆ ಯಾರಿಗೆ ಸೇರಿದ್ದು ಅಂತ ನಮಗೆ ಗೊತ್ತಿಲ್ಲ ಅದರೆ, ಮನೆಯವರು ಒಂದು ಬುದ್ಧಿವಂತಿಕೆಯ ಕೆಲಸ ಮಾತ್ರ ಮಾಡಿದ್ದಾರೆ. ನಾಗರಾಜನನ್ನು ತಡವುವ ಪ್ರಯತ್ನ ಮಾಡದೆ ಅದರ ಪಾಲಿಗೆ ಅದನ್ನು ಬಿಟ್ಟು ಅದೇ ಊರಲ್ಲಿರುವ ಉರಗ ತಜ್ಞರೊಬ್ಬರಿಗೆ ಫೋನ್ ಮಾಡಿ ಕರೆಸಿಕೊಂಡಿದ್ದಾರೆ.

ಉರಗ ತಜ್ಞರು ಬರುವವರೆಗೆ ಅವರು ಉರಗದ ಮೇಲೆ ನಿಗಾ ಇಟ್ಟಿದ್ದಾರೆ. ಹಾವು ನೀರಿನ ಬಕೆಟ್ ಇಟ್ಟಿರುವ ಬಯಲು ಬಚ್ಚಲಿನಂತೆ ಕಾಣುವ ಜಾಗದಲ್ಲಿ ಆರಾಮವಾಗಿ ಪವಡಿಸಿದೆ. ದುರ್ಬಲ ಹೃದಯದವರು ಇಂಥ ದೃಶ್ಯವನ್ನು ನೋಡಬಾರದು ಮಾರಾಯ್ರೇ. ಆದರೆ, ಜೀವಶಾಸ್ತ್ರಜ್ಞರ ಪ್ರಕಾರ ಹಾವು ಒಂದು ನಿರುಪದ್ರವಿ ಜೀವಿ. ಅದನ್ನು ತಡವಿದರೆ ಮಾತ್ರ ಕಚ್ಚಲು ಬರುತ್ತದಂತೆ.

ಹಾವು ಹಿಡಿದುಕೊಂಡು ಹೋಗಲು ಬಂದಿರುವ ತಜ್ಞರು ಸಹ ಅದನ್ನೇ ಹೇಳುತ್ತಾರೆ. ಮೊದಲು ಅವರು ಹಾವನ್ನು ಹಿಡಿಯುವ ರೀತಿಯನ್ನು ಗಮನಿಸಿ. ಅದಕ್ಕೆ ತರುಚದಂತೆ, ಗಾಯವಾಗದಂತೆ ಬಹಳ ನಾಜೂಕಾಗಿ ಹಿಡಿದು ಗೋಣಿಯೊಳಗೆ ಹಾಕಿ ಚೀಲದ ಬಾಯಿಯನ್ನು ಕಟ್ಟಿಬಿಡುತ್ತಾರೆ.

ಆಮೇಲೆ, ಅವರು ವೀಕ್ಷಕರಿಗೆ ಒಂದು ಸಂದೇಶವನ್ನು ನೀಡುತ್ತಾರೆ. ಮನೆಯಲ್ಲಿ, ಅವರಣದಲ್ಲಿ ಅಥವಾ ಹಿತ್ತಲಲ್ಲಿ-ಎಲ್ಲೇ ಹಾವು ಕಂಡರೂ ಅದನ್ನು ಹಿಂಸಿಸುವ ಕೆಲಸಕ್ಕೆ ಮುಂದಾಗದೆ ಅವರಂಥ ಉರಗ ತಜ್ಞರಿಗೆ ಫೋನ್ ಮಾಡಬೇಕಂತೆ. ಅವರು ಅದನ್ನು ಹಿಡಿದು ಸುರಕ್ಷಿತವಾಗಿ ಅರಣ್ಯಪ್ರದೇಶದೊಳಗೆ ಒಯ್ದು ಬಿಡುತ್ತಾರೆ.

ಇದನ್ನೂ ಓದಿ: ಅನಾರೋಗ್ಯದಿಂದ ಬಳಲುತ್ತಿರುವ ಹುಡುಗಿಗೆ ವಿಡಿಯೋ ಕಾಲ್ ಮೂಲಕ ಧೈರ್ಯ ತುಂಬಿದರು ಸೂಪರ್​​ಸ್ಟಾರ್ ರಜಿನೀಕಾಂತ್

Published on: Dec 22, 2021 06:52 PM