ಬೆಂಗಳೂರಲ್ಲಿ ನಡೆದ ಕಿಕ್ಬಾಕ್ಸಿಂಗ್ ಸ್ಪರ್ಧೆಯಲ್ಲಿ ಮೈಸೂರು ಸ್ಪರ್ಧಿ ನಿಖಿಲ್ ದಾರುಣ ಸಾವು
ನಿಖಿಲ್ ಅವರನ್ನು ಕೂಡಲೇ ಹತ್ತಿರದ ಅಸ್ಪತ್ರೆಯೊಂದಕ್ಕೆ ಸಾಗಿಸಲಾಗುತ್ತಾದರೂ ಎರಡು ದಿನಗಳ ಕಾಲ ಕೋಮಾವಸ್ಥೆಯಲ್ಲಿದ್ದ ಬಳಿಕ ಜುಲೈ 12 ರಂದು ಅವರು ಕೊನೆಯುಸಿರೆಳೆಯುತ್ತಾರೆ.
ಬೆಂಗಳೂರು: ಕಿಕ್ ಬಾಕ್ಸಿಂಗ್ (Kickboxing) ಕ್ರೀಡೆ ಜನಪ್ರಿಯಗೊಳ್ಳುತ್ತಿರುವುದು ನಿಜವಾದರೂ ಅದು ಬಹಳ ಅಪಾಯಕಾರಿ ಆಟ ಅನ್ನೋದು ಸುಳ್ಳಲ್ಲ. ಇದಕ್ಕೆ ತಾಜಾ ಉದಾಹರಣೆಯೆಂದರೆ ಜುಲೈ 10 ರಂದು ಬೆಂಗಳೂರಿನ ಕೆಂಗೇರಿಯಲ್ಲಿ ಆಯೋಜಿಸಲಾಗಿದ್ದ ಸ್ಪರ್ಧೆಯಲ್ಲಿ ಮೈಸೂರು ಮೂಲದ ಸ್ಪರ್ಧಿ 24-ವರ್ಷ-ವಯಸ್ಸಿನ ನಿಖಿಲ್ (Nikhil) ಸಾವು. ಎದುರಾಳಿಯು ನಿಖಿಲ್ ಮುಖದ ಮೇಲೆ ಪಂಚ್ ಮಾಡಿದಾಗ ಅವರು ರಿಂಗ್ ನಲ್ಲಿ ಕುಸಿದುಬಿದ್ದು ಕೋಮಾಗೆ ಜಾರುತ್ತಾರೆ. ಈ ದೃಶ್ಯ ಮೊಬೈಲ್ ಫೋನೊಂದರಲ್ಲಿ ಸೆರೆಯಾಗಿದೆ. ನಿಖಿಲ್ ಅವರನ್ನು ಕೂಡಲೇ ಹತ್ತಿರದ ಅಸ್ಪತ್ರೆಯೊಂದಕ್ಕೆ ಸಾಗಿಸಲಾಗುತ್ತಾದರೂ ಎರಡು ದಿನಗಳ ಕಾಲ ಕೋಮಾವಸ್ಥೆಯಲ್ಲಿದ್ದ ಬಳಿಕ ಜುಲೈ 12 ರಂದು ಅವರು ಕೊನೆಯುಸಿರೆಳೆಯುತ್ತಾರೆ.
ಆಯೋಜಕರ ಯಡವಟ್ಟಿನಿಂದಲೇ ನನ್ನ ಮಗ ಸಾವನ್ನಪ್ಪಿದ್ದಾನೆ
ಆಯೋಜಕರ ಯಡವಟ್ಟಿನಿಂದಲೇ ನನ್ನ ಮಗ ಸಾವನ್ನಪ್ಪಿದ್ದಾನೆ ಎಂದು ಮೃತ ಬಾಕ್ಸರ್ನ ತಂದೆ ಕೆಂಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬಾಕ್ಸಿಂಗ್ ಪಂದ್ಯದ ವೇಳೆ ಆರ್ಗನೈಜರ್‌ಗಳ ಅತೀವ ನಿರ್ಲ್ಯಕ್ಷದಿಂದ ನನ್ನ ಮಗ ಸಾವಿನ್ನಪ್ಪಿದ್ದಾನೆಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. 10/07/2022 ರಂದು ಸಂಜೆ ಸುಮಾರು 6-00 ಗಂಟೆಗೆ ಪಂದ್ಯಾವಳಿ ನಡೆಯುವ ಸ್ಥಳದಿಂದ ನನ್ನ ಹೆಂಡತಿಗೆ ಫೋನ್ ಮಾಡಿ ನಿಮ್ಮ ಮಗ ನಿಖಿಲ್‌ಗೆ ಗಾಯವಾಗಿದೆ ಎಂಬ ಮಾಹಿತಿಯನ್ನಷ್ಟೇ ನೀಡಿದ್ದರು.
ಈ ಘಟನೆಯ ಬಗ್ಗೆ ಆರ್ಗನೈಜರ್‌ಗಳ ಬಳಿ ಘಟನೆಯ ಬಗ್ಗೆ ವಿವರವಾಗಿ ಕೇಳಿದಾಗ, ಪಂದ್ಯಾವಳಿ ನಡೆಯುವ ರಿಂಗ್‌ನಲ್ಲಿ ನೆಲಕ್ಕೆ ಹಾಸಿರುವ ಸ್ಪಾಂಜ್ ಮ್ಯಾಟ್ ತೆಳುವಾಗಿದ್ದ ಕಾರಣ ನೆಲಕ್ಕೆ ಬಿದ್ದಾಗ ತಲೆಗೆ ಬಲವಾದ ಪೆಟ್ಟು ಬಿದ್ದಿದೆ ಎಂದು ಉತ್ತರಿಸಿದ್ದರು. ಆದರೆ ಪಂದ್ಯಾವಳಿ ಸಮಯದಲ್ಲಿ ಗಾಯಗಳಾದಲ್ಲಿ ತಕ್ಷಣಕ್ಕೆ ಸ್ಪಂದಿಸಲು ಪ್ಯಾರಮೆಡಿಕಲ್ ಕಲ್ಪಿಸಿರುವುದಿಲ್ಲ, ಆಕ್ಸಿಜನ್ ವ್ಯವಸ್ಥೆ ಇಲ್ಲ ಮತ್ತು 5 ನೇ ಮಹಡಿಯಲ್ಲಿ ಪಂದ್ಯಾವಳಿಯನ್ನು ಆಯೋಜಿಸಿದ್ದು, ಇಂತಹ ತುರ್ತು ಸಮಯದಲ್ಲಿ ಗಾಯಾಳುವನ್ನು ತುರ್ತಾಗಿ ಆಸ್ಪತ್ರೆಗೆ ಸಾಗಿಸಲು ಯಾವುದೇ ವ್ಯವಸ್ಥೆ ಕಲ್ಪಿಸಿಲ್ಲ.
ನಿರ್ಲ್ಯಕ್ಷತನದಿಂದ ಮತ್ತು ಬೇಜಾವಬ್ದಾರಿತನದಿಂದ ಪಂದ್ಯಾವಳಿಯನ್ನು ಆಯೋಜಿಸಿದ್ದು ಗಾಯಗೊಂಡ ನನ್ನ ಮಗನನ್ನು ಘಟನೆಯ ಸ್ಥಳದಲ್ಲಿಯೇ ಸೂಕ್ತ ರೀತಿಯಲ್ಲಿ ಪ್ರಥಮ ಚಿಕತ್ಸೆ ನೀಡದೇ ಆಂಬುಲೆನ್ಸ್ ವಾಹನದ ವ್ಯವಸ್ಥೆ ಮಾಡಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಹೀಗಾಗಿ ಆರ್ಗನೈಜರ್‌ಗಳ ನಿರ್ಲ್ಯಕ್ಷತನದಿಂದಲೇ ನನ್ನ ಮಗ ಸಾವನ್ನಪ್ಪಿದ್ದಾನೆ. ಅಲ್ಲದೆ ಆಯೋಜಕರಾದ ನವೀನ್ , ರವಿ ಶಂಕರ್ ಮಾಹಿತಿ ನೀಡದೆ ಪರಾರಿಯಾಗಿದ್ದಾರೆ. ಆದ್ದರಿಂದ ಪಂದ್ಯಾವಳಿ ಆರ್ಗನೈಜರ್‌ಗಳನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ಮೃತನ ತಂದೆ ದೂರು ನೀಡಿದ್ದಾರೆ.
ಇದನ್ನೂ ಓದಿ: Crime News: ಯುವಕನ ಮರ್ಮಾಂಗಕ್ಕೆ ಪೆಟ್ರೋಲ್ ಸುರಿದು, ನಗ್ನ ವಿಡಿಯೋ ರೆಕಾರ್ಡ್ ಮಾಡಿದ ಮಾಲೀಕ