ಮಹದೇವಪುರ ಕ್ಷೇತ್ರದಲ್ಲಿ ಮತಗಳ್ಳತನ ಆರೋಪ: ಟಿವಿ9 ರಿಯಾಲಿಟಿ ಚೆಕ್ ನಲ್ಲಿ ಸತ್ಯ ಬಯಲು
ರಾಹುಲ್ ಗಾಂಧಿ ಅವರು ಮಹಾದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಲಕ್ಷ ಮತಗಳ ಕಳ್ಳತನ ಆಗಿದೆ ಎಂದು ಆರೋಪಿಸಿದ್ದಾರೆ. ಟಿವಿ9 ರಿಯಾಲಿಟಿ ಚೆಕ್ ಈ ಆರೋಪವನ್ನು ಪರಿಶೀಲಿಸಿದೆ. ಮುನಿರೆಡ್ಡಿ ಗಾರ್ಡನ್‌ನ ಮನೆ ಸಂಖ್ಯೆ 35 ರಲ್ಲಿ 80 ಮತದಾರರಿದ್ದಾರೆ ಎಂಬ ಆರೋಪ ನಿರಾಧಾರ ಎಂದು ಕಂಡುಬಂದಿದೆ. ಮನೆಯ ಮಾಲೀಕರು ಈ ಆರೋಪವನ್ನು ತಳ್ಳಿಹಾಕಿದ್ದಾರೆ. ವಾಸ್ತವದಲ್ಲಿ, ಪಶ್ಚಿಮ ಬಂಗಾಳದ ವ್ಯಕ್ತಿ ಮಾತ್ರ ಅಲ್ಲಿ ವಾಸಿಸುತ್ತಿದ್ದಾರೆ.
ಬೆಂಗಳೂರು, ಆಗಸ್ಟ್ 08: ಲೋಕಸಭಾ ಚುನಾವಣೆಯಲ್ಲಿ ಸಮಯದಲ್ಲಿ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ 1 ಲಕ್ಷ ಮತಗಳ ಕಳ್ಳತನವಾಗಿದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಈ ಆರೋಪಕ್ಕೆ ಸಂಬಂಧಿಸಿದಂತೆ ಟಿವಿ9 ರಿಯಾಲಿಟಿ ಚೆಕ್ ಮಾಡಿದೆ. ಮಹಾದೇವಪುರ ವಿಧಾನಸಭಾ ಕ್ಷೇತ್ರದ ಮುನಿರೆಡ್ಡಿ ಗಾರ್ಡನ್ ಮನೆ ನಂಬರ್ 35 ರಲ್ಲಿ 80 ಜನ ಮತದಾರರು ಇದ್ದಾರೆ ಎಂಬ ಆರೋಪ ಮಾಡಲಾಗಿದೆ. ಆದರೆ, ಟಿವಿ9 ರಿಯಾಲಿಟಿ ಚೆಕ್ನಲ್ಲಿ ಸತ್ಯಾಂಶ ಬಯಲಾಗಿದೆ. ಈ ಮನೆ 10 ಬೈ 15 ಜಾಗದಲ್ಲಿದೆ. ಸದ್ಯ ಈ ಮನೆಯಲ್ಲಿ ಪಶ್ಚಿಮ ಬಂಗಾಳ ಮೂಲದ ವ್ಯಕ್ತಿ ಕಳೆದ ಎರಡು ತಿಂಗಳಿನಿಂದ ವಾಸವಾಗಿದ್ದಾರೆ.
ಆರೋಪ ಸಂಬಂಧ 35ನಂ ಮನೆಯ ಮಾಲೀಕ ಜಯರಾಮರೆಡ್ಡಿ ಟಿವಿ9 ಜೊತೆ ಮಾತನಾಡಿ, ನಮ್ಮ ಮನೆಯಲ್ಲಿ 80 ಜನ ವಾಸವಿಲ್ಲ. 10 ಬೈ 15 ಇರುವ ಮನೆಯಲ್ಲಿ 80 ಜನ ವಾಸ ಮಾಡಲು ಆಗುತ್ತಾ? ಇದು ಸುಳ್ಳು ಆರೋಪ. ರಾಹುಲ್ ಗಾಂಧಿ ಬಿಡುಗಡೆ ಮಾಡಿರುವ ಮತದಾರರ ಪಟ್ಟಿಯಲ್ಲಿ ಇದ್ದವರು ಈ ಮನೆಯಲ್ಲಿ ಯಾರು ವಾಸವಿಲ್ಲ ಎಂದು ಆರೋಪವನ್ನು ತಳ್ಳಿ ಹಾಕಿದರು.
ಕರ್ನಾಟಕದವರು ಇಲ್ಲಿಯವರೆಗೆ ಯಾರು ವಾಸ ಮಾಡಿಲ್ಲ. ಎಲ್ಲ ಹೊರ ರಾಜ್ಯದವರು ವಾಸವಾಗಿದ್ದಾರೆ. ಇವರು ಯಾರೂ ಕೂಡ ಕರ್ನಾಟಕದ ಮತದಾನದ ಗುರುತಿನ ಚೀಟಿ ಮಾಡಿಸಿಕೊಂಡಿಲ್ಲ. ನಾನು ಬಿಜೆಪಿ ಕಾರ್ಯಕರ್ತ ಅಲ್ಲ. ಯಾವುದೇ ತನಿಖೆ ಬಂದರೂ ನಾನು ಎದುರಿಸಲು ಸಿದ್ಧನಾಗಿದ್ದೇನೆ. ನಾನು ತಪ್ಪು ಮಾಡಿಲ್ಲ ನನಗೆ ಯಾವುದೇ ಭಯವಿಲ್ಲ ಎಂದರು.
