ಎಲ್​ಪಿಜಿ ಸಿಲಿಂಡರ್ ಸಮಸ್ಯೆ ಇದ್ರೂ ನೋ ಟೆನ್ಶನ್: ಗಮನ ಸೆಳೆಯುತ್ತಿದೆ ಪೊಲೀಸ್​ ಕಾನ್​ಸ್ಟೇಬಲ್ ಮನೆಯ ಬಯೋಗ್ಯಾಸ್ ಪದ್ಧತಿ

Edited By:

Updated on: Mar 17, 2026 | 10:26 AM

ಎಲ್​ಪಿಜಿ ಸಿಲಿಂಡರ್ ಕೊರತೆ ನಡುವೆ, ರಾಯಚೂರಿನ ಕಾನ್​ಸ್ಟೇಬಲ್ ವಿನೋದ್ ತಮ್ಮ ಮನೆಯಲ್ಲಿ ಕೇವಲ 10,500 ರೂ. ವೆಚ್ಚದಲ್ಲಿ ಬಯೋಗ್ಯಾಸ್ ಘಟಕ ಅಳವಡಿಸಿಕೊಂಡು ಮಾದರಿಯಾಗಿದ್ದಾರೆ. ತ್ಯಾಜ್ಯದಿಂದ ಉತ್ಪಾದಿಸುವ ಈ ಅಡುಗೆ ಅನಿಲ, ಸಿಲಿಂಡರ್ ಅವಲಂಬನೆಯನ್ನು ತಪ್ಪಿಸಿ, ಪರಿಸರ ಸ್ನೇಹಿ ಮತ್ತು ಆರ್ಥಿಕವಾಗಿ ಲಾಭದಾಯಕ ಎಂದು ಸಾರ್ವಜನಿಕರನ್ನು ಆಕರ್ಷಿಸಿದೆ.

ರಾಯಚೂರು, ಮಾರ್ಚ್ 17: ಎಲ್​ಪಿಜಿ ಸಿಲಿಂಡರ್ ಕೊರತೆ ರಾಜ್ಯಾದ್ಯಂತ ಜನರನ್ನು ತೀವ್ರವಾಗಿ ಕಾಡುತ್ತಿರುವ ಸಮಯದಲ್ಲಿ, ರಾಯಚೂರಿನ ಕಾನ್​ಸ್ಟೇಬಲ್ ವಿನೋದ್ ಬಯೋಗ್ಯಾಸ್ ಪದ್ಧತಿ ಅಳವಡಿಸಿ ಗಮನ ಸೆಳೆದಿದ್​ದಾರೆ. ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಪರಿಣಾಮವಾಗಿ ಎಲ್​ಪಿಜಿ ಸಿಲಿಂಡರ್‌ಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ, ಅನೇಕ ಕಡೆಗಳಲ್ಲಿ ಜನ ಕಿಲೋಮೀಟರ್‌ಗಟ್ಟಲೆ ಸರತಿಯಲ್ಲಿ ನಿಂತು ಪರದಾಡುತ್ತಿರುವಂಥ ಸ್ಥಿತಿ ಇದೆ. ವಿನೋದ್ ಅವರು ಕಳೆದ ಎರಡು ವರ್ಷಗಳಿಂದ ಮನೆಯ ದೈನಂದಿನ ಅಡುಗೆಗೆ ಬಯೋಗ್ಯಾಸ್ ಬಳಸುತ್ತಿದ್ದು, ಇದು ಯಾವುದೇ ಅಡೆತಡೆ ಇಲ್ಲದೆ ಕಾರ್ಯನಿರ್ವಹಿಸುತ್ತಿದೆ. ಇದು ಈಗ ಗಮನ ಸೆಳೆದಿದೆ.

ಕೇವಲ 10,500 ರೂ. ವೆಚ್ಚದಲ್ಲಿ 1000 ಲೀಟರ್ ಸಾಮರ್ಥ್ಯದ ಸಿಂಟೆಕ್ಸ್ ಟ್ಯಾಂಕ್ ಬಳಸಿ ಈ ಘಟಕವನ್ನು ಸ್ಥಾಪಿಸಲಾಗಿದೆ. ಇದು ಗೃಹ ತ್ಯಾಜ್ಯ, ಹಣ್ಣು, ತರಕಾರಿ ತ್ಯಾಜ್ಯದಿಂದ ಅನಿಲ ಉತ್ಪಾದಿಸುತ್ತದೆ. ಇದು ಎಲ್​ಪಿಜಿ ಸಿಲಿಂಡರ್‌ನಂತೆಯೇ ಹೆಚ್ಚಿನ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತದೆ. ವಿನೋದ್ ಅವರ ಈ ಮಾದರಿ ಪದ್ಧತಿಯನ್ನು ವೀಕ್ಷಿಸಲು ಮತ್ತು ಮಾಹಿತಿ ಪಡೆಯಲು ಈಗ ಸಾಕಷ್ಟು ಮಂದಿ ಅವರ ಮನೆಗೆ ಭೇಟಿ ನೀಡುತ್ತಿದ್ದಾರೆ. ಈ ಬಯೋಗ್ಯಾಸ್ ಪದ್ಧತಿಯು ಕನಿಷ್ಠ 25-30 ವರ್ಷಗಳ ಬಾಳಿಕೆ ಬರಲಿದ್ದು, ಆರ್ಥಿಕವಾಗಿ ಮತ್ತು ಪರಿಸರ ಸ್ನೇಹಿಯಾಗಿ ಉತ್ತಮ ಪರ್ಯಾಯವಾಗಿದೆ ಎಂದು ಅವರು ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us