ನಂಬಿದವರನ್ನು ರಾಜಣ್ಣ ಯಾವತ್ತೂ ಕೈಬಿಟ್ಟಿಲ್ಲ, ಸಿದ್ದರಾಮಯ್ಯ ಕೂಡ ತಮ್ಮ ಶಿಷ್ಯನ ರಕ್ಷಣೆಗೆ ನಿಲ್ಲಬೇಕು: ವಾಲ್ಮೀಕಿ ಸಮುದಾಯ ಮುಖಂಡ

Updated on: Aug 12, 2025 | 6:28 PM

ರಾಜಣ್ಣ ತಮ್ಮನ್ನು ನಂಬಿದವರನ್ನು ಯಾವತ್ತೂ ಕೈ ಬಿಟ್ಟವರಲ್ಲ, ಎಂಥ ತ್ಯಾಗಕ್ಕಾದರೂ ಅವರು ಸಿದ್ಧರಾಗುತ್ತಾರೆ, ರಾಜ್ಯ ರಾಜಕೀಯದಲ್ಲಿ ಅವರು ಸಿದ್ದರಾಮಯ್ಯರನ್ನು ಯಾವ ಹಂತದಲ್ಲೂ ಬಿಟ್ಟುಕೊಡಲಿಲ್ಲ, ನೆರಳಿನಂತೆ ಅವರನ್ನು ಹಿಂಬಾಲಿಸುತ್ತಾರೆ, ರಾಜಣ್ಣ ತಮ್ಮ ಶಿಷ್ಯರ ಪರ ನಿಂತಂತೆಯೇ ಸಿದ್ದರಾಮಯ್ಯ ಕೂಡ ತಮ್ಮ ಶಿಷ್ಯನೊಂದಿಗೆ ನಿಂತುಕೊಳ್ಳಬೇಕಿರುವ ಸನ್ನಿವೇಶ ಸೃಷ್ಟಿಯಾಗಿದೆ ಎಂದು ಸಮುದಾಯದ ಮುಖಂಡ ಹೇಳಿದರು.

ತುಮಕೂರು, ಆಗಸ್ಟ್ 12: ತುಮಕೂರು ಜಿಲ್ಲೆಯಲ್ಲಿ ಕೆಎನ್ ರಾಜಣ್ಣ ಅವರ ಬೆಂಬಲಿಗರು ಮತ್ತು ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ರಾಜಣ್ಣ ಪ್ರತಿನಿಧಿಸುವ ವಾಲ್ಮೀಕಿ ಸಮುದಾಯವರು (Valmiki community) ನಾಳೆ ಬೃಹತ್ ರ‍್ಯಾಲಿಯನ್ನು ನಡೆಸಲಿದ್ದು ಸುಮಾರು 10,000 ಜನ ಭಾಗವಹಿಸುವ ನಿರೀಕ್ಷೆ ಇದೆ. ಮಾಧ್ಯಮ ಗೋಷ್ಠಿಯನ್ನು ಉದ್ದೇಶಿಸಿ ಮಾತಾಡಿದ ಸಮುದಾಯದ ಮುಖಂಡರೊಬ್ಬರು, ರಾಜಣ್ಣರನ್ನು ಯಾವುದೇ ನೋಟೀಸ್ ಇಲ್ಲದೆ, ವಿಚಾರಣೆ ಇಲ್ಲದೆ ವಜಾ ಮಾಡಿದ್ದು ಸರಿಯಲ್ಲ, ಅವರು ಸಮುದಾಯದ ಪ್ರಮುಖ ನಾಯಕ, ತುಮಕೂರು ಜಿಲ್ಲೆಯಿಂದ ಏಳು ಕಾಂಗ್ರೆಸ್ ನಾಯಕರು ವಿಧಾನಸಭೆಗೆ ಆಯ್ಕೆಯಾಗಲು ಅವರು ಕಾರಣೀಭೂತರಾಗಿದ್ದಾರೆ, ಈ ಬಾರಿಯ ಅಸೆಂಬ್ಲಿ ಚುನಾವಣೆಯಲ್ಲಿ ವಾಲ್ಮೀಕಿ ಸಮುದಾಯದ 14 ಕಾಂಗ್ರೆಸ್ ಶಾಸಕರಿದ್ದಾರೆ, ರಾಜಣ್ಣರನ್ನು ಸಂಪುಟಕ್ಕೆ ಸೇರಿಸಿಕೊಳ್ಳದಿದ್ದರೆ ಏನು ಬೇಕಾದರೂ ಆಗಬಹುದು ಎಂಬ ಎಚ್ಚರಿಕೆಯನ್ನು ಅವರು ಕಾಂಗ್ರೆಸ್ ಹೈಕಮಾಂಡ್​​ಗೆ ನೀಡಿದರು. ಸತ್ಯ ಹೇಳಿದ್ದೇ ಅವರ ಪಾಲಿಗೆ ಮುಳುವಾಯಿತೇ? ಒಂದು ವೇಳೆ ಇದೇ ನಿಜವಾಗಿದ್ದರೆ ರಾಜಣ್ಣರನ್ನು ವಜಾ ಮಾಡಿದ್ದು ಪ್ರಜಾಪ್ರಭುತ್ವವ ಕೊಲೆಯಲ್ಲದೆ ಮತ್ತೇನೂ ಅಲ್ಲ ಎಂದು ಅವರು ಹೇಳಿದರು.

ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಸಚಿವ ಸ್ಥಾನ ತ್ಯಜಿಸಲು ಸಿದ್ಧ ಎಂದು ಮತ್ತೊಮ್ಮೆ ಹೇಳಿದ ಕೆಎನ್ ರಾಜಣ್ಣ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ