ಕೈ ಸನ್ನೆಯೊಂದಿಗೆ ವಿಶ್ಲೇಷಣೆ… ಬಿದ್ದು ಬಿದ್ದು ನಕ್ಕ RCB ಆಟಗಾರರು
IPL 2026 RCB vs CSK: ಸಿಎಸ್‌ಕೆ ವಿರುದ್ಧ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 250 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 19.4 ಓವರ್ಗಳಲ್ಲಿ 207 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಆರ್ಸಿಬಿ ತಂಡ 43 ರನ್ಗಳ ಜಯ ಸಾಧಿಸಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ನ ಹೈವೋಲ್ಟೇಜ್ ಮ್ಯಾಚ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜಯಭೇರಿ ಬಾರಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ 20 ಓವರ್ಗಳಲ್ಲಿ ಕಲೆಹಾಕಿದ್ದು ಬರೋಬ್ಬರಿ 250 ರನ್ಗಳು. ಈ ಗುರಿಯನ್ನು ಬೆನ್ನತ್ತಿದ ಸಿಎಸ್‌ಕೆ ಕೇವಲ 207 ರನ್ಗಳಿಸಿ 43 ರನ್ಗಳಿಂದ ಸೋಲೊಪ್ಪಿಕೊಂಡಿತು.
ಈ ಗೆಲುವಿನ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಡ್ರೆಸ್ಸಿಂಗ್ ರೂಮ್‌ನಲ್ಲಿ ನಡೆದ ಆಟಗಾರರ ನಡುವಣ ಪ್ರಶಂಸೀಯ ಮಾತುಗಳ ನಡುವೆ ರೊಮಾರಿಯೊ ಶೆಫರ್ಡ್ ಟಿಮ್ ಡೇವಿಡ್ ಅವರ ಇನಿಂಗ್ಸ್ ಅನ್ನು ವಿವರಿಸಿರುವುದು ಇದೀಗ ಭಾರೀ ವೈರಲ್ ಆಗಿದೆ.
ಈ ಪಂದ್ಯದಲ್ಲಿ ಟಿಮ್ ಡೇವಿಡ್ ಅವರು ಎದುರಿಸಿದ ಕೇವಲ 25 ಎಸೆತಗಳಲ್ಲಿ ಅಜೇಯ 70 ರನ್ ಚಚ್ಚಿ ಸಿಎಸ್‌ಕೆ ಬೌಲರ್‌ಗಳನ್ನು ಕಂಗೆಡಿಸಿದ್ದರು. ಈ ಸ್ಫೋಟಕ ಬ್ಯಾಟಿಂಗ್ ಅನ್ನು ಪಂದ್ಯದ ನಂತರ ಡ್ರೆಸ್ಸಿಂಗ್ ರೂಮ್‌ನಲ್ಲಿ ವಿಶ್ಲೇಷಿಸಿದ ಸಹ ಆಟಗಾರ ರೊಮಾರಿಯೋ ಶೆಫರ್ಡ್ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದರು.
ಟಿಮ್ ಡೇವಿಡ್ ಅವರ ಬ್ಯಾಟಿಂಗ್ ಶೈಲಿಯನ್ನು ಅಣಕಿಸಿದ ಶೆಫರ್ಡ್, “ಟಿಮ್, ನೀನು ಮೊದಲು ಐದು ಎಸೆತಗಳನ್ನು ತುಂಬಾ ಶಾಂತವಾಗಿ ಎದುರಿಸಿದ್ದೀಯಾ. ನಂತರ ಏನಾಗುತ್ತೆ ಅಂದ್ರೆ…” ಎಂದು ಹೇಳುತ್ತಾ, ಕೈ ಸನ್ನೆ ಮಾಡಿದ್ದಾರೆ.
ಇತ್ತ ರೊಮಾರಿಯೋ ಶೆಫರ್ಡ್ ಅವರ ಕೈ ಸನ್ನೆಯ ವಿಶ್ಲೇಷಣೆ ಕಂಡು ವಿರಾಟ್ ಕೊಹ್ಲಿ ಸೇರಿದಂತೆ ಇಡೀ ತಂಡವೇ ಜೋರಾಗಿ ನಗಲಾರಂಭಿಸಿದರು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಶೆಫರ್ಡ್ ಅವರ ಕೈ ಸನ್ನೆಯೇ ಪ್ರಮುಖ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ.
