ಹಿಂದಿ ಪೇಜ್ ತೆಗೆಯದಿದ್ರೆ ಮ್ಯಾಚ್ ನಡೆಯೋಕೆ ಬಿಡಲ್ಲ; ಆರ್​ಸಿಬಿಗೆ ಕನ್ನಡ ಪರ ಸಂಘಟನೆಗಳ ಎಚ್ಚರಿಕೆ

ಹಿಂದಿ ಪೇಜ್ ತೆಗೆಯದಿದ್ರೆ ಮ್ಯಾಚ್ ನಡೆಯೋಕೆ ಬಿಡಲ್ಲ; ಆರ್​ಸಿಬಿಗೆ ಕನ್ನಡ ಪರ ಸಂಘಟನೆಗಳ ಎಚ್ಚರಿಕೆ

ಪೃಥ್ವಿಶಂಕರ
|

Updated on:Nov 28, 2024 | 5:10 PM

RCB: ಆರ್​ಸಿಬಿ ಫ್ರಾಂಚೈಸಿ ಕನ್ನಡ ಆಟಗಾರರನ್ನು ಐಪಿಎಲ್ ಮೆಗಾ ಹರಾಜಿನಲ್ಲಿ ಆಯ್ಕೆ ಮಾಡದಿರುವುದು ಮತ್ತು ಇದೀಗ ಹಿಂದಿ ಭಾಷೆಯ ಎಕ್ಸ್ ಖಾತೆಯನ್ನು ತೆರೆದಿರುವುದು ಕನ್ನಡಿಗರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕನ್ನಡ ಪರ ಸಂಘಟನೆಗಳು ಆರ್​ಸಿಬಿ ವಿರುದ್ಧ ಉಗ್ರ ಹೋರಾಟದ ಎಚ್ಚರಿಕೆ ನೀಡಿವೆ. ಹಿಂದಿ ಖಾತೆಯನ್ನು ತೆಗೆದುಹಾಕದಿದ್ದರೆ ಬೆಂಗಳೂರಿನಲ್ಲಿ ನಡೆಯುವ ಪಂದ್ಯಗಳಿಗೆ ಅಡ್ಡಿಪಡಿಸುವುದಾಗಿ ಬೆದರಿಕೆ ಹಾಕಲಾಗಿದೆ. ಹೀಗಾಗಿ ಆರ್​ಸಿಬಿ ತನ್ನ ನಿಲುವು ಬದಲಾಯಿಸುತ್ತದೆಯೇ ಎಂದು ಕಾದು ನೋಡಬೇಕಿದೆ.

ಐಪಿಎಲ್ ಮೆಗಾ ಹರಾಜಿನಲ್ಲಿ ಕರ್ನಾಟಕದ ಆಟಗಾರರನ್ನು ಖರೀದಿಸಲು ಮುಂದಾಗದ ಆರ್​ಸಿಬಿ ಫ್ರಾಂಚೈಸಿಗೆ ಕನ್ನಡಿಗರು ಹಿಡಿ ಶಾಪ ಹಾಕುತ್ತಿದ್ದಾರೆ. ಇದು ಸಾಲದೆಂಬಂತೆ ಇದೀಗ ಕನ್ನಡಿಗರನ್ನು ಕೆರಳುವಂತೆ ಮಾಡಿರುವ ಫ್ರಾಂಚೈಸಿ ತನ್ನ ಸೋಶಿಯಲ್ ಮೀಡಿಯಾ ಖಾತೆ ಎಕ್ಸ್​ನಲ್ಲಿ ಅಧಿಕೃತವಾಗಿ ಹಿಂದಿ ಖಾತೆಯನ್ನು ತೆರೆದಿದೆ. ಮೊದಲೇ ಕನ್ನಡಿಗರನ್ನು ಖರೀದಿಸದಿದ್ದಕ್ಕೆ ಸಿಟ್ಟಾಗಿದ್ದ ಕನ್ನಡಿಗರು ಇದೀಗ ಹಿಂದಿ ಎಕ್ಸ್​ ಖಾತೆಯನ್ನು ಡಿಲೀಟ್ ಮಾಡದಿದ್ದರೆ, ಬೆಂಗಳೂರಿನಲ್ಲಿ ಆರ್​ಸಿಬಿ ಪಂದ್ಯಗಳು ನಡೆಯುವುದಕ್ಕೆ ಅಡ್ಡಿಪಡಿಸುವುದಾಗಿ ಎಚ್ಚರಿಕೆ ನೀಡಿವೆ. ಇದರ ಜೊತೆಗೆ ಉಗ್ರ ಹೋರಾಟ ಮಾಡುವುದಾಗಿ ಆರ್​ಸಿಬಿಗೆ ಬೆದರಿಕೆ ಹಾಕಿವೆ.

ಕನ್ನಡ ಪರ ಸಂಘಟನೆಗಳ ಎಚ್ಚರಿಕೆ

ಐಪಿಎಲ್ ಮೆಗಾ ಹರಾಜು ಮುಗಿದ ಬಳಿಕ ಹಿಂದಿ ಭಾಷೆಯಲ್ಲಿ ಎಕ್ಸ್ ಖಾತೆ ತೆರೆದಿರುವ ಆರ್​ಸಿಬಿ, ಹೊಸ ತಂಡದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿತ್ತು. ಇದನ್ನು ಗಮನಿಸಿದ್ದ ನೆಟ್ಟಿಗರು, ಫ್ರಾಂಚೈಸಿಯ ವಿರುದ್ಧ ಗುಡಿಗಿದ್ದರು. ಇದರ ಜೊತೆಗೆ ಕೂಡಲೇ ಎಕ್ಸ್​​ ಖಾತೆಯನ್ನು ತೆಗೆಯುವಂತೆ ಆಗ್ರಹಿಸಿದ್ದರು. ಆದರೆ ಈ ಬಗ್ಗೆ ಫ್ರಾಂಚೈಸಿ ಕಡೆಯಿಂದ ಯಾವುದೇ ಸ್ಪಷ್ಟನೆ ಹೊರಬಂದಿಲ್ಲ. ಇದರಿಂದ ಇನ್ನಷ್ಟು ಕೆರಳಿರುವ ಕನ್ನಡ ಪರ ಸಂಘಟನೆಗಳು, ಆರ್​ಸಿಬಿ ಫ್ರಾಂಚೈಸಿಯ ಈ ನಡೆಯನ್ನು ವಿರೋಧಿಸಿದ್ದು, ಕೂಡಲೇ ಆರ್​ಸಿಬಿ ಹಿಂದಿ ಖಾತೆಯನ್ನು ತೆಗೆಯುವಂತೆ ಎಚ್ಚರಿಕೆ ನೀಡಿವೆ. ಒಂದು ವೇಳೆ ಆರ್​ಸಿಬಿ ಹಿಂದಿ ಖಾತೆಯನ್ನು ಡಿಲೀಟ್ ಮಾಡದಿದ್ದರೆ, ಮ್ಯಾಚ್ ನಡೆಯುವ ವೇಳೆ ಆಟಕ್ಕೆ ತೊಂದರೆ ನೀಡುವ ಜೊತೆಗೆ ಆರ್​ಸಿಬಿ ವಿರುದ್ಧ ಉಗ್ರ ಹೋರಾಟ ಮಾಡುವುದಾಗಿ ಕರವೇ ಪ್ರವೀಣ್ ಶೆಟ್ಟಿ ಬಣ ಎಚ್ಚರಿಕೆ ನೀಡಿದೆ. ಕನ್ನಡಿಗರ ಒತ್ತಾಯಕ್ಕೆ ಮಣಿದು ಆರ್​ಸಿಬಿ ಹಿಂದಿ ಖಾತೆಯನ್ನು ಡಿಲೀಟ್ ಮಾಡುತ್ತದಾ ಅಥವಾ ತನ್ನ ಧೋರಣೆಯನ್ನು ಹೀಗೆಯೇ ಮುಂದುವರೆಸುತ್ತಾ ಎಂಬುದನ್ನು ಕಾದು ನೋಡಬೇಕಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಯಶ್ ದಯಾಳ್, ಲಿಯಾಮ್ ಲಿವಿಂಗ್‌ಸ್ಟನ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಜೋಶ್ ಹೇಜಲ್‌ವುಡ್, ರಸಿಖ್ ಸಲಾಂ, ಸುಯೇಶ್ ಶರ್ಮಾ, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ನುವಾನ್ ತುಷಾರ, ರೊಮಾರಿಯೋ ಶೆಫರ್ಡ್, ಜಾಕೋಬ್ ಬೈತ್ಲೆ, ಮನೋಜ್ ಭಾಂಡಗೆ, ಸ್ವಸ್ತಿಕ್ ಚಿಕಾರಾ, ದೇವ್ದುತ್ ಚಿಕಾರಾ, ಮೋಹಿತ್ ರಾಠಿ, ಅಭಿನಂದನ್ ಸಿಂಗ್, ಲುಂಗಿ ಎನ್ಗಿಡಿ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Nov 28, 2024 05:07 PM