ಮೀಸಲಾತಿ ವ್ಯವಸ್ಥೆ ಬಗ್ಗೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದೇನು?
ಸಾಮಾಜಿಕ ಅಸಮಾನತೆ ಮತ್ತು ತಾರತಮ್ಯ ಇರುವವರೆಗೆ ದೇಶದಲ್ಲಿ ಜಾತಿ ಆಧಾರಿತ ಮೀಸಲಾತಿ ವ್ಯವಸ್ಥೆ ಮುಂದುವರಿಯಲಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ ಸ್ಪಷ್ಟಪಡಿಸಿದ್ದಾರೆ. ಆದರೆ, ಮೀಸಲಾತಿಯ ಪ್ರಯೋಜನವನ್ನು ಪಡೆದು ಆರ್ಥಿಕ ಹಾಗೂ ಸಾಮಾಜಿಕವಾಗಿ ಶಕ್ತಿಯುತರಾದವರು ಉದಾರ ಮನಸ್ಸಿನಿಂದ ಆ ಸೌಲಭ್ಯವನ್ನು ಬಿಟ್ಟುಕೊಡಲು ಮುಂದೆ ಬರಬೇಕು ಎಂದು ಅವರು ಕರೆ ನೀಡಿದ್ದಾರೆಮುಂಬೈನಲ್ಲಿ ಯುವಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಮೀಸಲಾತಿಯ ಕುರಿತು ಪ್ರಸ್ತುತ ನಡೆಯುತ್ತಿರುವ ಚರ್ಚೆಗಳ ನಡುವೆ ಸಂಘದ ನಿಲುವನ್ನು ಸ್ಪಷ್ಟಪಡಿಸಿದರು.
ಮುಂಬೈ, ಆಗಸ್ಟ್ 6: ಮುಂಬೈನಲ್ಲಿ ಜೆನ್-ಜಿ ಮತ್ತು ಜೆನ್ ಆಲ್ಫಾ ವಿದ್ಯಾರ್ಥಿಗಳೊಂದಿಗಿನ ಸಂವಾದದ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಮೀಸಲಾತಿ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. “ಸಾಮಾಜಿಕ ತಾರತಮ್ಯ ಇರುವವರೆಗೆ ಮೀಸಲಾತಿ ಮುಂದುವರಿಯುತ್ತದೆ. ಇದರಲ್ಲಿ ಯಾವುದೇ ರಾಜಕೀಯ ಇರಬಾರದು. ಇದು ಸಮಾಜದಲ್ಲಿ ತಾರತಮ್ಯವನ್ನು ಸೃಷ್ಟಿಸುತ್ತದೆ, ಇದು ಏಕತೆಯನ್ನು ತರುವುದಿಲ್ಲ. ಮೀಸಲಾತಿ ಮುಂದುವರಿಯಲಿದೆ. ಆದರೆ, ಅದರ ಸೌಲಭ್ಯ ಪಡೆದು ಅಭಿವೃದ್ಧಿ ಹೊಂದಿದವರು ಸ್ವಯಂಪ್ರೇರಿತರಾಗಿ ಬೇರೆಯವರಿಗೆ ಬಿಟ್ಟುಕೊಡಬೇಕು” ಎಂದು ಹೇಳಿದ್ದಾರೆ.
ಮೀಸಲಾತಿಯ ಸೌಲಭ್ಯಗಳನ್ನು ಪಡೆದುಕೊಂಡು ಸಮಾಜದ ಮುಖ್ಯವಾಹಿನಿಗೆ ಬಂದು ಯಶಸ್ಸು ಕಂಡಿರುವ ಕುಟುಂಬಗಳು ದೊಡ್ಡ ಮನಸ್ಸು ಮಾಡಿ ಆ ಸೌಲಭ್ಯವನ್ನು ತ್ಯಾಗ ಮಾಡಬೇಕು. ಇದರಿಂದ ಅದೇ ಸಮುದಾಯದ ಇತರ ಹಿಂದುಳಿದ ಹಾಗೂ ವಂಚಿತ ಜನರಿಗೆ ಮೀಸಲಾತಿಯ ಲಾಭ ದೊರೆಯಲು ಸಹಾಯವಾಗುತ್ತದೆ. ಮೀಸಲಾತಿಯ ಲಾಭ ಪಡೆದವರೇ ಸ್ವಯಂಪ್ರೇರಿತರಾಗಿ ಸೌಲಭ್ಯ ಬಿಟ್ಟುಕೊಡಬೇಕೆಂಬ ಇಂತಹ ಸದ್ಭಾವನೆ ಮತ್ತು ಆಲೋಚನೆಗಳು ಈಗ ಮೀಸಲಾತಿ ಪಡೆಯುತ್ತಿರುವ ಸಮುದಾಯಗಳ ಒಳಗಿನಿಂದಲೇ ಹೊರಹೊಮ್ಮುತ್ತಿರುವುದು ಶ್ಲಾಘನೀಯ ಎಂದು ಅವರು ಉಲ್ಲೇಖಿಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ