20 ವರ್ಷಗಳ ಬಳಿಕ ಸಮಾಗಮ: 105 ವರ್ಷದ ತಾಯಿ ನೋಡಲು ದುರ್ಗಮ ಹಾದಿಯಲ್ಲಿ ಕ್ರಮಿಸಿ ಬಂದ 85 ವರ್ಷದ ಮಗಳು!
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಕಾಡಂಚಿನ ಗ್ರಾಮದಲ್ಲಿ ಸರಿಯಾದ ರಸ್ತೆ ಸಂಪರ್ಕವಿಲ್ಲದೆ 20 ವರ್ಷಗಳಿಂದ ತವರು ಮನೆಗೆ ತೆರಳದೇ ಇದ್ದ 85 ವರ್ಷದ ಮಗಳು, ದುರ್ಗಮ ಹಾದಿ ಕ್ರಮಿಸಿ 105 ವರ್ಷದ ತಾಯಿಯನ್ನು ಭೇಟಿಯಾಗಿ ಭಾವುಕರಾಗಿದ್ದಾರೆ. ಮೊಮ್ಮಕ್ಕಳ ಸಹಾಯದಿಂದ ಕಾಡು-ಮೇಡಿನ ದುರ್ಗಮ ಹಾದಿಯಲ್ಲಿ ಕ್ರಮಿಸಿ ಕೊನೆಗೂ ಹೆತ್ತವಳನ್ನು ಭೇಟಿಯಾಗಿದ್ದಾರೆ.
ಮಂಗಳೂರು, ಸೆಪ್ಟೆಂಬರ್ 11: ಅಪರೂಪದಲ್ಲೇ ಅಪರೂಪದ ಘಟನೆಯೊಂದಕ್ಕೆ ದಕ್ಷಿಣ ಕನ್ನಡ ಜಿಲ್ಲೆ ಸಾಕ್ಷಿಯಾಗಿದೆ. 105 ವರ್ಷದ ತಾಯಿ ನೋಡಲು ದುರ್ಗಮ ಹಾದಿಯಲ್ಲಿ ಕ್ರಮಿಸಿ 85 ವರ್ಷದ ಮಗಳು ಬಂದಿದ್ದು, 20 ವರ್ಷಗಳ ಬಳಿಕ ತಾಯಿ-ಮಗಳ ಸಮಾಗಮವಾಗಿದೆ. ಬೆಳ್ತಂಗಡಿ ತಾಲೂಕಿನ ಕಾಡಂಚಿನ ಗ್ರಾಮವಾದ ಮಕ್ಕಿಯ ಸೀತಮ್ಮ ಎಂಬವರ ಮಗಳಾದ ಸುಶೀಲಾರನ್ನು ಪಕ್ಕದ ಮಲವಂತಿಕೆ ಗ್ರಾಮಕ್ಕೆ ವಿವಾಹ ಮಾಡಿಕೊಡಲಾಗಿತ್ತು. ತವರು ಮನೆಗೆ ಹೋಗಲು ಸರಿಯಾದ ರಸ್ತೆ ವ್ಯವಸ್ಥೆ ಇಲ್ಲದ ಕಾರಣ, ಕಳೆದ 20 ವರ್ಷಗಳಿಂದ ಮಕ್ಕಿಗೆ ಭೇಟಿಯನ್ನು ಸುಶೀಲಾ ಅವರು ನಿಲ್ಲಿಸಿದ್ದರು. ತಮ್ಮ 65ನೇ ವರ್ಷದ ಬಳಿಕ ತವರು ಮನೆಗೆ ಭೇಟಿ ಅವರ ಕನಸಾಗಿಯೇ ಉಳಿದಿತ್ತು. ಆದರೀಗ ಮೊಮ್ಮಕ್ಕಳ ಸಹಾಯದಿಂದ ಕಾಡು-ಮೇಡಿನ ದುರ್ಗಮ ಹಾದಿಯಲ್ಲಿ ಕ್ರಮಿಸಿ ಕೊನೆಗೂ ಸುಶೀಲಾ ಅವರು ತಮ್ಮ ತಾಯಿ ಸೀತಮ್ಮರ ಭೇಟಿ ಮಾಡಿದ್ದಾರೆ. ಇದೇ ನಮ್ಮ ಕೊನೆಯ ಭೇಟಿ ಎಂದು ತಾಯಿಗೆ ಭಾವುಕರಾಗಿ ತಿಳಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us