ಬೆಂಗಳೂರು ಏರ್‌ಪೋರ್ಟ್ ಚೆಕಿಂಗ್ ಪಾಯಿಂಟ್ ಬಳಿಯೇ ರೋಡ್ರೇಜ್: ಸಿನಿಮೀಯ ರೀತಿಯಲ್ಲಿ ಕಾರು ಚೇಸ್ ಮಾಡಿ ಬೈಕ್ ಸವಾರನ ಕಿರಿಕ್
ಬೆಂಗಳೂರು ವಿಮಾನ ನಿಲ್ದಾಣದ ಸೆಕ್ಯೂರಿಟಿ ಚೆಕಿಂಗ್ ಪಾಯಿಂಟ್ ಬಳಿ ಬೈಕ್ ಸವಾರನೊಬ್ಬ ಸಿನಿಮೀಯ ರೀತಿಯಲ್ಲಿ ಕ್ಯಾಬ್ ಅನ್ನು ಚೇಸ್ ಮಾಡಿ ಅಡ್ಡಗಟ್ಟಿ ಕಿರಿಕ್ ನಡೆಸಿದ್ದಾನೆ. ನಂತರ ಭದ್ರತಾ ಸಿಬ್ಬಂದಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಘಟನೆಯ ವಿಡಿಯೋ ಮತ್ತೊಂದು ಕ್ಯಾಬ್ ಚಾಲಕನ ಮೊಬೈಲ್ನಲ್ಲಿ ಸೆರೆಯಾಗಿದೆ. ವಿಡಿಯೋ ಇಲ್ಲಿದೆ.
ದೇವನಹಳ್ಳಿ, ಜನವರಿ 5: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎಬಿ) ಸೆಕ್ಯೂರಿಟಿ ಚೆಕಿಂಗ್ ಪಾಯಿಂಟ್ ಬಳಿಯೇ ಸಿನಿಮೀಯ ರೋಡ್ರೇಜ್ ನಡೆದಿದೆ. ಕ್ಯಾಬ್ ಚಾಲಕ ಮತ್ತು ಬೈಕ್ ಸವಾರನ ನಡುವೆ ಉಂಟಾದ ಕಿರಿಕ್ ಏರ್‌ಪೋರ್ಟ್ ರಸ್ತೆಯಲ್ಲಿ ಕಾರು–ಬೈಕ್ ಚೇಸ್‌ಗೆ ತಿರುಗಿದ್ದು, ಭದ್ರತಾ ಸಿಬ್ಬಂದಿ ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಬೈಕ್ ಸವಾರ ಕ್ಯಾಬ್ ಅನ್ನು ಸಿನಿಮೀಯವಾಗಿ ಹಿಂಬಾಲಿಸಿಕೊಂಡು ಹೋಗಿ, ಏರ್‌ಪೋರ್ಟ್ ಸೆಕ್ಯೂರಿಟಿ ಚೆಕಿಂಗ್ ಪಾಯಿಂಟ್ ಬಳಿ ಅಡ್ಡಗಟ್ಟಿ ಗಲಾಟೆ ನಡೆಸಿದ್ದಾನೆ. ಹಿಂಬದಿ ಬರುತ್ತಿದ್ದ ಮತ್ತೊಂದು ಕಾರಿನ ಚಾಲಕನ ಮೊಬೈಲ್ ಕ್ಯಾಮರಾದಲ್ಲಿ ಘಟನೆಯ ವಿಡಿಯೋ ರೆಕಾರ್ಡ್ ಆಗಿದೆ.
ಬೈಕ್ ಸವಾರ ಕ್ಯಾಬ್ ಅನ್ನು ಹಿಂಬಾಲಿಸಿ ಅಡ್ಡಗಟ್ಟಿದ ವೇಳೆ, ಕಾರಿನೊಳಗಿದ್ದ ಯುವತಿ ಭಯಭೀತಳಾಗಿದ್ದಾಳೆ. ನಡು ರಸ್ತೆಯಲ್ಲಿ ನಡೆದ ಈ ಗಲಾಟೆಯಿಂದ ಕೆಲಕಾಲ ವಾಹನ ಸಂಚಾರಕ್ಕೂ ಅಡಚಣೆ ಉಂಟಾಗಿದೆ. ಸ್ಥಳಕ್ಕೆ ಧಾವಿಸಿದ ಏರ್‌ಪೋರ್ಟ್ ಭದ್ರತಾ ಸಿಬ್ಬಂದಿ ಇಬ್ಬರಿಗೂ ಬುದ್ಧಿವಾದ ಹೇಳಿ, ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾರೆ. ಈ ಘಟನೆ ದೇವನಹಳ್ಳಿ ವಿಮಾನ ನಿಲ್ದಾಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.