ಹಣ ತೆಗೆಯಲು ಸಾಧ್ಯವಾಗದೇ ಎಟಿಎಂ ಮಷಿನ್ ಹೊತ್ತೊಯ್ದ ಖದೀಮರು..!

ಹಣ ತೆಗೆಯಲು ಸಾಧ್ಯವಾಗದೇ ಎಟಿಎಂ ಮಷಿನ್ ಹೊತ್ತೊಯ್ದ ಖದೀಮರು..!

ರಮೇಶ್ ಬಿ. ಜವಳಗೇರಾ
|

Updated on: Jan 29, 2025 | 5:42 PM

ಬೀದರ್​ನಲ್ಲಿ ಖದೀಮರು ಗುಂಡಿನ ದಾಳಿ ಮಾಡಿ ಎಂಟಿಎಂ ಹಣ ಕದ್ದೊಯ್ದಿರುವ ಘಟನೆ ಬೆನ್ನಲ್ಲೇ ಮಂಗಳೂರಿನಲ್ಲಿ ಬ್ಯಾಂಕ್​ ದರೋಡೆ ನಡೆಯಿತು. ಇದೀಗ ಹಾಸನದಲ್ಲಿ ಖದೀಮರು ಎಂಟಿಎಂ ಮಷಿನ್​ ಅನ್ನೇ ಕದ್ದು ತೆಗೆದುಕೊಂಡು ಹೋಗಿದ್ದಾರೆ. ಮೊದಲು ಮಷಿನ್​ನಲ್ಲಿದ್ದ ಹಣ ಕದಿಯಲು ಪ್ರಯತ್ನಿಸಿದ್ದಾರೆ. ಆದ್ರೆ, ಅದು ಸಾಧ್ಯವಾಗಿಲ್ಲದಿದ್ದರಿಂದ ಎಟಿಎಂ ಮಷಿನ್​ ಅನ್ನೇ ಹೊತ್ತೊಯ್ದಿದ್ದಾರೆ.

ಹಾಸನ, (ಜನವರಿ 29): ಹಣ ಕದಿಯಲು ಬಂದ ಚೋರರು ಎಟಿಎಂ‌ ಮಷಿನ್ ಅನ್ನೇ ಹೊತ್ತೊಯ್ದಿರುವ ಘಟನೆ ಹಾಸನ‌ ಜಿಲ್ಲೆಯ ಹನಮಂತಪುರ ಗ್ರಾಮದಲ್ಲಿ ನಡೆದಿದೆ. ಅರಕಲಗೂಡು ಮೂಲದ ತನುಜ ಎಂಬುಬವರು ಮೂರು ಎಟಿಎಂ ಮಷಿನ್ ಹೊರ ಗುತ್ತಿಗೆ ಪಡೆದುಕೊಂಡಿದ್ದು ಒಂದನ್ನು ಹನುಮಂತಪುರದಲ್ಲಿ ಇಂಡಿಯಾ ಒನ್ ಹೆಸರಿನ ಎಟಿಎಂ ಕೇಂದ್ರ ತೆರೆದು ಸ್ಥಾಪನೆ‌ ಮಾಡಿದ್ದು, ನಿನ್ನೆ‌ಸಂಜೆ ಮಷಿನ್ ಗೆ ಒಂದು ಲಕ್ಷ ಹಣವನ್ನು ಎಟಿಎಂಗೆ ಹಾಕಿದ್ದರು.  ಆದ್ರೆ, ರಾತ್ರಿ 2.ಗಂಟೆ ಸುಮಾರಿಗೆ ಎಟಿಎಂಗೆ ನುಗ್ಗಿದ ಚೋರರು  ಹಣ ದೋಚಲು ಪ್ರಯತ್ನಿಸಿದ್ದಾರೆ. ಆದರೆ ಅದು ಸಾಧ್ಯವಾಗದಿದ್ದಾಗ ಎಟಿಎಂ ಮಷಿನ್ ಅನ್ನೇ ಹೊತ್ತೊಯ್ದಿದ್ದಾರೆ. ಜೊತೆಗೆ ಮಷಿನ್ ನಲ್ಲಿಯೇ ಸಿಸಿ‌ಕ್ಯಾಮೆರಾ ಹಾಗು ಡಿವಿಆರ್ ಇದ್ದ ಕಾರಣ ಹಣ ತೆಗೆದುಕೊಂಡು ಹೋಗಿ ಮಷಿನ್ ಅಲ್ಲೇ ಬಿಟ್ಟರೆ ತಮ್ನ ಸುಳಿವು ಸಿಗಲಿದೆ ಎನ್ನುವ ಆತಂಕದಿಂದ‌ ಎಟಿಎಂ ಯಂತ್ರವನ್ನೇ ಹೊತ್ತೊಯ್ದಿದ್ದಾರೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಕೇಸ್ ದಾಖಲಿಸಿಕೊಂಡಿರುವ‌ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸ್ಥಳದಲ್ಲಿ ಶ್ವಾನ ದಳದ‌ ಮೂಲಕ ಪರಿಶೀಲನೆ ನಡೆಸಲಾಗಿದ್ದು ಸುತ್ತ ಮುತ್ತ ಲಭ್ಯವಿರುವ ಸಿಸಿ ಕ್ಯಾಮೆರಾ ದೃಶ್ಯಗಳನ್ನ ಆದರಿಸಿ ಪೊಲಿಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.