ಅಣ್ಣ 10 ವರ್ಷಗಳಿಂದ ಕಾಯುತ್ತಿದ್ದೇನೆ ಎಂದ ಫ್ಯಾನ್​ಗೆ ನಿರಾಸೆ ಮಾಡದ ರೋಹಿತ್; ವಿಡಿಯೋ

ಅಣ್ಣ 10 ವರ್ಷಗಳಿಂದ ಕಾಯುತ್ತಿದ್ದೇನೆ ಎಂದ ಫ್ಯಾನ್​ಗೆ ನಿರಾಸೆ ಮಾಡದ ರೋಹಿತ್; ವಿಡಿಯೋ

ಪೃಥ್ವಿಶಂಕರ
|

Updated on: Dec 02, 2024 | 9:10 PM

Rohit Sharma autograph: ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ ಅವರ ಅಭಿಮಾನಿಯೊಬ್ಬರು 10 ವರ್ಷಗಳ ಕಾಯುವಿಕೆಯ ನಂತರ ಅವರ ಆಟೋಗ್ರಾಫ್ ಪಡೆದಿದ್ದಾರೆ. ಪರ್ತ್ ಪಂದ್ಯದಲ್ಲಿ ವೈಯಕ್ತಿಕ ಕಾರಣಗಳಿಂದ ಹೊರಗುಳಿದ ರೋಹಿತ್, ಅಡಿಲೇಡ್‌ನಲ್ಲಿ ನಡೆಯುವ ಎರಡನೇ ಪಂದ್ಯಕ್ಕೆ ಸಜ್ಜಾಗಿದ್ದಾರೆ. ಅಭ್ಯಾಸ ಪಂದ್ಯದಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ ಪಡಿಕ್ಕಲ್ ಮತ್ತು ಜುರೆಲ್ ಬದಲಿಗೆ ಗಿಲ್ ಆಡುವ ಸಾಧ್ಯತೆ ಇದೆ.

ಪ್ರಸ್ತುತ ಟೀಂ ಇಂಡಿಯಾ, ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಾಗುತ್ತಿದೆ. ಭಾರತ ತಂಡ ಸರಣಿಯ ಮೊದಲ ಪಂದ್ಯವನ್ನು ಗೆದ್ದು 1-0 ಅಂತರದ ಮುನ್ನಡೆ ಸಾಧಿಸಿದೆ. ಈ ಪಂದ್ಯದ ನಂತರ ಭಾರತ ತಂಡ ಕ್ಯಾನ್‌ಬೆರಾದಲ್ಲಿ ಆಸ್ಟ್ರೇಲಿಯಾ ಪ್ರೈಮ್ ಮಿನಿಸ್ಟರ್ಸ್ ಇಲೆವೆನ್ ತಂಡದ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಿತ್ತು. ಪಂದ್ಯದ ನಂತರ ರೋಹಿತ್ ಶರ್ಮಾ ಅಭಿಮಾನಿಯೊಬ್ಬರಿಗೆ ಆಟೋಗ್ರಾಫ್ ನೀಡಿದ್ದು, ಈ ಅಭಿಮಾನಿಯ 10 ವರ್ಷಗಳ ಕಾಯುವಿಕೆ ಅಂತ್ಯಗೊಂಡಿದೆ.

ಅಭಿಮಾನಿಯ ಕಾಯುವಿಕೆ ಅಂತ್ಯ

ಅಭ್ಯಾಸ ಪಂದ್ಯದಲ್ಲಿ ಪ್ರೈಮ್ ಮಿನಿಸ್ಟರ್ಸ್ ಇಲೆವೆನ್ ತಂಡವನ್ನು ಸೋಲಿಸಿದ ನಂತರ, ರೋಹಿತ್ ಶರ್ಮಾ ಗ್ಯಾಲರಿಯಲ್ಲಿ ಕುಳಿತಿದ್ದ ಅಭಿಮಾನಿಗಳನ್ನು ಭೇಟಿ ಮಾಡಿದರು. ಈ ವೇಳೆ ರೋಹಿತ್ ಎಲ್ಲರಿಗೂ ಆಟೋಗ್ರಾಫ್ ನೀಡುತ್ತಿದ್ದಾರೆ. ರೋಹಿತ್ ಆಟೋಗ್ರಾಫ್ ನೀಡುತ್ತಿದ್ದಾಗ ಅಭಿಮಾನಿಯೊಬ್ಬರು ರೋಹಿತ್ ಭಾಯ್, 10 ವರ್ಷಗಳಿಂದ ನಿಮ್ಮ ಹಸ್ತಾಕ್ಷರಕ್ಕಾಗಿ ಕಾಯುತ್ತಿದ್ದೇನೆ ಎಂದು ಹಲವು ಬಾರಿ ಕೂಗಿ ಹೇಳಿದ್ದಾರೆ. ಆದಾಗ್ಯೂ ರೋಹಿತ್ ಆ ಅಭಿಮಾನಿಯ ಕೂಗಿಗೆ ಗಮನ ಕೊಡಲಿಲ್ಲ. ಇದನ್ನು ಗಮನಿಸಿದ ಆ ಅಭಿಮಾನಿ ‘ರೋಹಿತ್ ಭಾಯ್ ಮುಂಬೈನ ರಾಜ’ ಎಂದು ಕೂಗಲಾರಂಭಿಸಿದ. ಇದನ್ನು ಕೇಳಿ ರೋಹಿತ್ ಸೇರಿದಂತೆ ಅಲ್ಲಿದ್ದವರೆಲ್ಲರೂ ನಗತೊಡಗಿದರು. ನಂತರ ರೋಹಿತ್, ಆ ಅಭಿಮಾನಿಗೆ ಆಟೋಗ್ರಾಫ್ ನೀಡಿದರು. ಇದೀಗ ಈ ವಿಡಿಯೋವನ್ನು ಬಿಸಿಸಿಐ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಸಾಕಷ್ಟು ವೈರಲ್ ಆಗುತ್ತಿದೆ.

ಪರ್ತ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ವೈಯಕ್ತಿಕ ಕಾರಣಗಳಿಂದ ಆಡಲು ಸಾಧ್ಯವಾಗಲಿಲ್ಲ. ಆದರೆ, ಅಡಿಲೇಡ್​ನಲ್ಲಿ ನಡೆಯಲಿರುವ ಎರಡನೇ ಪಂದ್ಯಕ್ಕೆ ಸಜ್ಜಾಗಿದ್ದಾರೆ. ಆದರೆ ಅಭ್ಯಾಸ ಪಂದ್ಯದಲ್ಲಿ ರೋಹಿತ್ ಶರ್ಮಾ ಬ್ಯಾಟ್ ಹೆಚ್ಚು ಘರ್ಜಿಸಲಿಲ್ಲ. ಅಭ್ಯಾಸ ಪಂದ್ಯದಲ್ಲಿ ರೋಹಿತ್ 11 ಎಸೆತಗಳನ್ನು ಎದುರಿಸಿ ಕೇವಲ 3 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು.

ಅಡಿಲೇಡ್‌ನಲ್ಲಿ ಪಿಂಕ್ ಬಾಲ್ ಟೆಸ್ಟ್

ಎರಡನೇ ಪಂದ್ಯ ಅಡಿಲೇಡ್‌ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಭಾರತ ತಂಡದಲ್ಲಿ ಹಲವು ಬದಲಾವಣೆಗಳು ಕಂಡುಬರಲಿವೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಹೊರತಾಗಿ ಶುಭಮನ್ ಗಿಲ್ ಆಡಲಿದ್ದಾರೆ. ಹೀಗಾಗಿ ದೇವದತ್ ಪಡಿಕ್ಕಲ್ ಮತ್ತು ಧ್ರುವ್ ಜುರೆಲ್​ಗೆ ತಂಡದಿಂದ ಗೇಟ್​ಪಾಸ್ ಸಿಗಬಹುದು. ಪಡಿಕ್ಕಲ್ ಮತ್ತು ಜುರೆಲ್ ಪರ್ತ್ ಟೆಸ್ಟ್ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್‌ಗಳಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ್ದರು. ಹೀಗಾಗಿ ಅವರ ಬದಲಿಗೆ ರೋಹಿತ್ ಹಾಗೂ ಗಿಲ್ ಆಡುವುದನ್ನು ನಾವು ಕಾಣಬಹುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ