Rohit Sharma: ವಾಂಖೆಡೆ ಕ್ರೀಡಾಂಗಣದಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ; ವಿಡಿಯೋ ನೋಡಿ
Rohit Sharma Honored: ಟೀಂ ಇಂಡಿಯಾ ಕ್ರಿಕೆಟಿಗ ರೋಹಿತ್ ಶರ್ಮಾ ಅವರನ್ನು ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಗೌರವಿಸಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ಅವರ ಹೆಸರಿನಲ್ಲಿ ಒಂದು ಸ್ಟ್ಯಾಂಡ್ ಉದ್ಘಾಟಿಸಲಾಗಿದೆ. ಈ ಗೌರವವನ್ನು ಅವರ ಪತ್ನಿ, ಪೋಷಕರು ಮತ್ತು ಅನೇಕ ಗಣ್ಯರು ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ನೀಡಲಾಯಿತು. ರೋಹಿತ್ ಅವರ ಕ್ರಿಕೆಟ್‌ನಲ್ಲಿನ ಅಪಾರ ಕೊಡುಗೆಯನ್ನು ಈ ಮೂಲಕ ಸ್ಮರಿಸಲಾಗಿದೆ.
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಭಾರತೀಯ ಕ್ರಿಕೆಟ್‌ಗೆ ಅನೇಕ ಉತ್ತಮ ಕ್ಷಣಗಳನ್ನು ನೀಡಿದ್ದಾರೆ. ಕಳೆದ 18 ವರ್ಷಗಳಿಂದ, ರೋಹಿತ್ ವಿಶ್ವ ಕ್ರಿಕೆಟ್‌ನಲ್ಲಿ ಭಾರತದ ಘನತೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇದೀಗ ವೃತ್ತಿಜೀವನದಿಂದ ತೆರೆ ಮರೆಗೆ ಸರಿಯುತ್ತಿರುವ ರೋಹಿತ್ಗೆ ಭಾರತದಲ್ಲಿ ಮಾತ್ರವಲ್ಲದೆ ವಿಶ್ವ ಕ್ರಿಕೆಟ್‌ನಲ್ಲಿ ಕೆಲವೇ ಆಟಗಾರರಿಗೆ ಸಿಕ್ಕಿರುವ ಗೌರವ ಅವರಿಗೆ ಸಿಕ್ಕಿದೆ. ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದ ಒಂದು ಸ್ಟ್ಯಾಂಡ್ ಅನ್ನು ಹಿಟ್‌ಮ್ಯಾನ್‌ಗೆ ಅರ್ಪಿಸಿದೆ. ಮೇ 16, ಶುಕ್ರವಾರದಂದು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಅನ್ನು ಉದ್ಘಾಟಿಸಲಾಗಿದೆ.
ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ಮೇ 16, ಶುಕ್ರವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಅನ್ನು ಉದ್ಘಾಟಿಸಲಾಯಿತು. ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಕೆಲವು ದಿನಗಳ ಹಿಂದೆ ಟಿ20 ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರನ್ನು ಈ ರೀತಿ ಗೌರವಿಸಲು ಬಯಸುವುದಾಗಿ ಘೋಷಿಸಿತ್ತು. ಐಪಿಎಲ್ ಪಂದ್ಯದ ಸಮಯದಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಅನ್ನು ಉದ್ಘಾಟಿಸಲು ಎಂಸಿಎ ಯೋಜಿಸಿತ್ತು. ಆದರೆ ಪಂದ್ಯಾವಳಿಯನ್ನು ಅರ್ಧಕ್ಕೆ ನಿಲ್ಲಿಸಬೇಕಾದ್ದರಿಂದಾಗಿ ಅದನ್ನು ಮುಂದೂಡಲಾಯಿತು.
ಶುಕ್ರವಾರ, ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ, ಎಂಸಿಎ ರೋಹಿತ್ ಹೆಸರಿನ ಸ್ಟ್ಯಾಂಡ್ ಅನ್ನು ಉದ್ಘಾಟಿಸಿತು. ಈ ಸಮಯದಲ್ಲಿ, ರೋಹಿತ್ ಅವರ ಪತ್ನಿ ಮತ್ತು ಪೋಷಕರು ಸಹ ಅವರೊಂದಿಗೆ ಇದ್ದರು. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಮಾಜಿ ಎಂಸಿಎ ಅಧ್ಯಕ್ಷ ಶರದ್ ಪವಾರ್, ಪ್ರಸ್ತುತ ಎಂಸಿಎ ಅಧ್ಯಕ್ಷ ಅಜಿಂಕ್ಯ ನಾಯಕ್ ಮತ್ತು ಇತರ ಅನೇಕ ಅಧಿಕಾರಿಗಳು ಮತ್ತು ಅಭಿಮಾನಿಗಳು ಉಪಸ್ಥಿತರಿದ್ದರು.
ತುಂಬಾ ವಿಶೇಷವಾಗಿರುತ್ತದೆ
ಈ ಗೌರವವನ್ನು ಬಹಳ ವಿಶೇಷ ಎಂದು ಬಣ್ಣಿಸಿದ ರೋಹಿತ್, ‘ಈ ಮೈದಾನದಲ್ಲಿ ಮತ್ತೆ ಆಡುವಾಗ ಅದು ಸಂಪೂರ್ಣವಾಗಿ ವಿಭಿನ್ನವಾದ ಅನುಭವವಾಗಲಿದೆ. ನಾನು ಎರಡು ಸ್ವರೂಪಗಳಿಂದ ನಿವೃತ್ತಿ ಹೊಂದಿದ್ದೇನೆ ಆದರೆ ನಾನು ಇನ್ನೂ ಒಂದು ಸ್ವರೂಪದಲ್ಲಿ ಆಡುತ್ತಿದ್ದೇನೆ. ಆದ್ದರಿಂದ ಆಡುತ್ತಿರುವಾಗ ಈ ರೀತಿಯ ಗೌರವವನ್ನು ಪಡೆಯುವುದು ಸ್ವತಃ ಬಹಳ ವಿಶೇಷವಾಗಿದೆ. ಈಗ 21 ರಂದು, ನಾನು ಮುಂಬೈ ಇಂಡಿಯನ್ಸ್ ಪರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡುವಾಗ, ನನ್ನ ಹೆಸರನ್ನು ಸ್ಟ್ಯಾಂಡ್‌ಗಳಲ್ಲಿ ನೋಡುವುದು ತುಂಬಾ ವಿಶೇಷವಾಗಿರುತ್ತದೆ’ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ರೋಹಿತ್ ಜೊತೆಗೆ, ಭಾರತದ ಮಾಜಿ ನಾಯಕ ಅಜಿತ್ ವಾಡೇಕರ್ ಅವರಿಗೆ ಮೀಸಲಾಗಿರುವ ಸ್ಟ್ಯಾಂಡ್ ಅನ್ನು ಸಹ ಲೋಕಾರ್ಪಣೆ ಮಾಡಲಾಯಿತು. ಶರದ್ ಪವಾರ್ ಸ್ಟ್ಯಾಂಡ್ ಅನ್ನು ಸಹ ಉದ್ಘಾಟಿಸಲಾಯಿತು. ಪವಾರ್ ದೀರ್ಘಕಾಲದವರೆಗೆ ಎಂಸಿಎ ಅಧ್ಯಕ್ಷರಾಗಿದ್ದಲ್ಲದೆ ಅವರು ಬಿಸಿಸಿಐ ಅಧ್ಯಕ್ಷರೂ ಸಹ ಆಗಿದ್ದರು. ಅವರ ಅಧಿಕಾರಾವಧಿಯಲ್ಲಿ ಬಿಸಿಸಿಐ ಪ್ರಧಾನ ಕಚೇರಿ ಕೋಲ್ಕತ್ತಾದಿಂದ ಮುಂಬೈಗೆ ಸ್ಥಳಾಂತರಗೊಂಡಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ