ಡಾನ್ ರೀತಿ ಗನ್ ಹಿಡಿದು ಆವಾಜ್ ಹಾಕಿದ್ದ ರೌಡಿಶೀಟರ್ ತಂದಿದ್ದು ನಕಲಿ ಬಂದೂಕು!
ಬೆಂಗಳೂರಿನ ಹೊಸಕೋಟೆಯಲ್ಲಿ ರೌಡಿಶೀಟರ್ ವಾಹಿದ್ ಖಾನ್ ಎಂಬಾತ ನಕಲಿ ಗನ್ ಬಳಸಿ ಕ್ಯಾಷಿಯರ್‌ಗೆ ಬೆದರಿಸಿ ಉಚಿತ ಮದ್ಯ ಪಡೆಯಲು ಯತ್ನಿಸಿದ್ದಾನೆ. ತನ್ನ ಸಹಚರನೊಂದಿಗೆ ತೆರಳಿದ್ದ ಆರೋಪಿ, ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾನೆ. ಈತನ ಸಹಚರನ ಬಂಧನವಾಗಿದ್ದು, ಪ್ರಮುಖ ಆರೋಪಿ ವಾಹಿದ್ ಖಾನ್ ಬಂಧನಕ್ಕೆ ನಂದಗುಡಿ ಪೊಲೀಸರು ಬಲೆ ಬೀಸಿದ್ದಾರೆ.
ದೇವನಹಳ್ಳಿ, ಜನವರಿ 13: ಎಣ್ಣೆಗಾಗಿ ಬಂದೂಕು ತೋರಿಸಿ ಕ್ಯಾಷಿಯರ್‌ಗೆ ಬೆದರಿಕೆ ಪ್ರಕರಣ ಸಂಬಂಧ ರೌಡಿಶೀಟರ್ ವಾಹಿದ್ ಖಾನ್ ತೋರಿಸಿರುವ ಗನ್ ಡಮ್ಮಿ ಎಂಬುದು ತನಿಖೆ ವೇಳೆ ಗೊತ್ತಾಗಿದೆ. ಹೊಸಕೋಟೆ ತಾಲೂಕಿನ ಬಂಡಹಳ್ಳಿಯ ಬಾರ್ನಲ್ಲಿ ನಡೆದಿದ್ದ ಘಟನೆ ಸಂಬಂಧ ನಂದಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬೈಕ್ನಲ್ಲಿ ಆರೋಪಿ ವಾಹಿದ್ ಜೊತೆ ಬಾರ್ಗೆ ಬಂದಿದ್ದ ಅತೀಕ್ ಖಾನ್ನ ಪೊಲೀಸರು ಬಂಧಿಸಿದ್ದು, ಆರೋಪಿಗಳು ಎರಡು ಪೈಪ್ಗಳನ್ನು ಬಳಸಿ ನಕಲಿ ಗನ್ ತಯಾರಿಸಿದ್ದರು. ಟಿಂಕರಿಂಗ್ ಹಾಗೂ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದ ಅತಿಕ್ ಖಾನ್ 2 ಮೆಟಲ್ ಪೈಪ್, ಮರದ ಸ್ಟಾಕ್, ಕಪ್ಪು ಬೆಲ್ಟ್ ಬಳಸಿ ಡಮ್ಮಿ ಗನ್ ತಯಾರಿ ಮಾಡಿದ್ದ. ನೋಡೋಕೆ ಅದು ಡಬಲ್ ಬ್ಯಾರಲ್ ಗನ್ ರೀತಿ ಇತ್ತು ಎಂಬುದು ಗೊತ್ತಾಗಿದೆ. ಪ್ರಮುಖ ಆರೋಪಿ ರೌಡಿಶೀಟರ್ ವಾಹಿದ್ ಖಾನ್ಗಾಗಿ ಹುಡುಕಾಟ ಮುಂದುವರಿದಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
