GT vs CSK: ಸತತ 5ನೇ ಅರ್ಧಶತಕ; ಇತಿಹಾಸ ನಿರ್ಮಿಸಿದ ಸಾಯಿ ಸುದರ್ಶನ್
Sai Sudharsan's IPL Record: ಗುಜರಾತ್ ಟೈಟಾನ್ಸ್ ಆಟಗಾರ ಸಾಯಿ ಸುದರ್ಶನ್ ಐಪಿಎಲ್‌ನಲ್ಲಿ ಸತತ ಐದನೇ ಅರ್ಧಶತಕ ಗಳಿಸಿ ಇತಿಹಾಸ ನಿರ್ಮಿಸಿದ್ದಾರೆ. ಚೆನ್ನೈ ವಿರುದ್ಧ 84 ರನ್ ಸಿಡಿಸಿ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ನಂಬರ್ ಒನ್ ಸ್ಥಾನಕ್ಕೇರಿದ್ದಾರೆ. ಏಳು ವರ್ಷಗಳ ನಂತರ ಈ ಸಾಧನೆ ಮಾಡಿದ ಮೊದಲ ಬ್ಯಾಟರ್ ಇವರಾಗಿದ್ದಾರೆ. ಸತತ ಅಮೋಘ ಪ್ರದರ್ಶನ ನೀಡುತ್ತಿರುವ ಸುದರ್ಶನ್, ಈ ಆವೃತ್ತಿಯಲ್ಲಿ ಒಟ್ಟು 638 ರನ್ ಗಳಿಸಿ ಮಿಂಚಿದ್ದಾರೆ.
ಗುಜರಾತ್ ಟೈಟಾನ್ಸ್ ತಂಡದ ಆರಂಭಿಕ ಆಟಗಾರ ಸಾಯಿ ಸುದರ್ಶನ್ ಮತ್ತೊಮ್ಮೆ ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಸುದರ್ಶನ್ 84 ರನ್ಗಳ ಇನ್ನಿಂಗ್ಸ್ ಆಡುವ ಮೂಲಕ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇದು ಸದರ್ಶನ್ ಅವರ ಸತತ ಐದನೇ ಅರ್ಧಶತಕವಾಗಿದ್ದು, ಈ ಮೂಲಕ ಅವರು ಐಪಿಎಲ್‌ನಲ್ಲಿ ಏಳು ವರ್ಷಗಳ ನಂತರ ಈ ಸಾಧನೆ ಮಾಡಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಸುದರ್ಶನ್ಗೂ ಮೊದಲು, 2012 ರ ಐಪಿಎಲ್‌ನಲ್ಲಿ ವೀರೇಂದ್ರ ಸೆಹ್ವಾಗ್ ಈ ಸಾಧನೆ ಮಾಡಿದ್ದರು. ಅವರ ನಂತರ, ಜೋಸ್ ಬಟ್ಲರ್ 2018 ರಲ್ಲಿ ಈ ಸಾಧನೆ ಮಾಡಿದರೆ, ಡೇವಿಡ್ ವಾರ್ನರ್ 2019 ರಲ್ಲಿ ಈ ಸಾಧನೆ ಮಾಡಿದ್ದರು. ಸಾಯಿ ಸುದರ್ಶನ್ ಈ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್, ರಾಜಸ್ಥಾನ ರಾಯಲ್ಸ್, ಸನ್‌ರೈಸರ್ಸ್ ಹೈದರಾಬಾದ್, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸತತ ಐದು ಅರ್ಧಶತಕಗಳನ್ನು ಸಿಡಿಸಿದ್ದಾರೆ.
ಐಪಿಎಲ್‌ನಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿರುವ ಸುದರ್ಶನ್, 2024 ರ ಐಪಿಎಲ್‌ನಲ್ಲಿ 527 ರನ್ ಬಾರಿಸಿದರೆ, ಐಪಿಎಲ್ 2025 ರಲ್ಲಿ 759 ರನ್ ಕಲೆಹಾಕಿದ್ದರು. ಈಗ ಈ ಆವೃತ್ತಿಯಲ್ಲಿ ಆಡಿರುವ 14 ಪಂದ್ಯಗಳಲ್ಲಿ 638 ರನ್ ಗಳಿಸಿದ್ದಾರೆ. ಸುದರ್ಶನ್ ಈ ಸೀಸನ್ನಲ್ಲಿ ಒಂದು ಶತಕ ಮತ್ತು ಏಳು ಅರ್ಧಶತಕಗಳನ್ನು ಬಾರಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ