ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ ‘ರಾಷ್ಟ್ರಭಾಷೆ’ಯ ಚರ್ಚೆ!
India vs New Zealand, 1st ODI: ನ್ಯೂಝಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ 4 ವಿಕೆಟ್ಗಳ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ 50 ಓವರ್ಗಳಲ್ಲಿ 300 ರನ್ ಬಾರಿಸಿದರೆ, ಟೀಮ್ ಇಂಡಿಯಾ 49 ಓವರ್ಗಳಲ್ಲಿ 306 ರನ್ಗಳಿಸಿ ಭರ್ಜರಿ ಜಯ ಸಾಧಿಸಿದೆ.
ವಡೋದರಾದಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ವಿಕೆಟ್ ಕೀಪರ್ ಕೆಎಲ್ ರಾಹುಲ್, ವಾಷಿಂಗ್ಟನ್ ಸುಂದರ್ಗೆ ತಮಿಳಿನಲ್ಲಿ ಸಲಹೆಗಳನ್ನು ನೀಡುತ್ತಿದ್ದರು. ಸುಂದರ್ಗೆ ಚೆಂಡನ್ನು ಹೇಗೆ ಎಸೆಯಬೇಕೆಂದು ತಮಿಳಿನಲ್ಲಿ ಹೇಳುತ್ತಿರುವ ಕೆಎಲ್ ರಾಹುಲ್ ಧ್ವನಿ ಸ್ಟಂಪ್ ಮೈಕ್ನಲ್ಲಿ ಸೆರೆಯಾಗಿದೆ.
ಅತ್ತ ಕೆಎಲ್ ರಾಹುಲ್ಗೆ ತಮಿಳು ಬರುತ್ತಿದ್ದು, ಇತ್ತ ತಮಿಳುನಾಡು ಮೂಲದ ಕ್ರಿಕೆಟಿಗನೊಂದಿಗೆ ತಮಿಳಿನಲ್ಲೇ ಸಂಬೋಧಿಸುತ್ತಿದ್ದರು. ಇದನ್ನು ಕೇಳಿದ ಕಾಮೆಂಟೇಟರ್ ವರುಣ್ ಆರೋನ್, ಸುಂದರ್ ಜೊತೆ ಕೆಎಲ್ ರಾಹುಲ್ ತಮಿಳಿನಲ್ಲಿ ಮಾತನಾಡಬೇಕಾಗುತ್ತದೆ. ಇದರಿಂದ ಅವರಿಗೆ ಬೇಗ ಅರ್ಥವಾಗುತ್ತಿದೆ ಎಂದರು.
ಅಲ್ಲದೆ ಸಹ ಕಾಮೆಂಟೇಟರ್ ಆಗಿದ್ದ ಸಂಜಯ್ ಬಂಗಾರ್ಗೆ ಕೆಎಲ್ ರಾಹುಲ್ ಸುಂದರ್ ಜೊತೆ ತಮಿಳಿನಲ್ಲಿ ಮಾತನಾಡುತ್ತಿರುವುದರಿಂದ ಹೆಚ್ಚು ಸಹಕಾರಿಯಾಗುತ್ತಿದೆಯಲ್ಲವೇ ಎಂದು ಪ್ರಶ್ನಿಸಿದರು.
ಈ ವೇಳೆ ಸಂಜಯ್ ಬಂಗಾರ್, ನಾನು ರಾಷ್ಟ್ರ ಭಾಷೆಯನ್ನು ನಂಬುತ್ತೇನೆ ಎನ್ನುವ ಮೂಲಕ ಹೊಸ ಚರ್ಚೆಯನ್ನು ಹುಟ್ಟುಹಾಕಿದರು. ಅಂದರೆ ಇಲ್ಲಿ ಸಂಜಯ್ ಬಂಗಾರ್ ಈಗಲೂ ಹಿಂದಿ ರಾಷ್ಟ್ರ ಭಾಷೆ ಎಂಬ ಗುಂಗಿನಲ್ಲಿರುವುದು ಸ್ಪಷ್ಟ.
ಆದರೆ ಭಾರತಕ್ಕೆ ಯಾವುದೇ ರಾಷ್ಟ್ರೀಯ ಭಾಷೆ ಇಲ್ಲ ಎಂಬ ಸಾಮಾನ್ಯ ಅರಿವು ಸಂಜಯ್ ಬಂಗಾರ್ಗೆ ಇದ್ದಂತಿಲ್ಲ. 2010 ರಲ್ಲಿ ಗುಜರಾತ್ ಹೈಕೋರ್ಟ್, ಹಿಂದಿ ರಾಷ್ಟ್ರೀಯ ಭಾಷೆ ಎಂದು ಹೇಳಲು ಯಾವುದೇ ಅಧಿಕೃತ ದಾಖಲೆ ಇಲ್ಲ ಎಂದು ಸ್ಪಷ್ಟಪಡಿಸಿದೆ. ಇದಾಗ್ಯೂ ಲೈವ್ ಕಾಮೆಂಟ್ರಿಯಲ್ಲಿ ರಾಷ್ಟ್ರಭಾಷೆ ಮೇಲೆ ನಂಬಿಕೆಯಿದೆ ಎನ್ನುವ ಮೂಲಕ ಸಂಜಯ್ ಬಂಗಾರ್ ತಮ್ಮ ಅಜ್ಞಾನವನ್ನು ತೆರೆದಿಟ್ಟಿದ್ದಾರೆ.