ಅಪಘಾತದಲ್ಲಿ ಮೃತಪಟ್ಟ ಗರ್ಭಿಣಿ ಆಮೆ; ಮೊಟ್ಟೆಗಳಿಗೆ ಜನ್ಮದಾತನಾದ ವಿಜ್ಞಾನಿ – ವಿಡಿಯೋ ನೋಡಿ
ಎರಿಕ್ ಸಿ ಮಾರ್ಟಿನ್ ಅಲ್ಲಿದ್ದ ಏಳು ಮೊಟ್ಟೆಗಳನ್ನೂ ಜೋಪಾನವಾಗಿ ಎತ್ತಿಟ್ಟುಕೊಂಡು ಮನೆಗೆ ತೆಗೆದುಕೊಂಡು ಹೋಗಿ ಮರಿ ಮಾಡಿದ್ದಾರೆ. ಕಣ್ಬಿಡುವ ಮೊದಲೇ ತಾಯಿಯನ್ನು ಕಳೆದುಕೊಂಡ ಆಮೆ ಮರಿಗಳಿಗೆ ಅವರೇ ಜನ್ಮದಾತರಾಗಿದ್ದಾರೆ.
ಜಗತ್ತಿನಲ್ಲಿ ಮಾನವೀಯತೆ ಇನ್ನೂ ಬದುಕಿದೆ ಅನ್ನೋದಕ್ಕೆ ಆಗಾಗ ಕೆಲವು ಘಟನೆಗಳು ಸಾಕ್ಷಿಯಾಗಿ ಸಿಗುತ್ತಿರುತ್ತವೆ. ಮನುಷ್ಯ ತನ್ನ ದುರಾಸೆಯಿಂದ ಉಳಿದೆಲ್ಲಾ ಜೀವಿಗಳ ಪಾಲಿಗೆ ಕಂಟಕವಾಗುತ್ತಿರುವ ಹೊತ್ತಿನಲ್ಲಿ ಕೆಲವರು ಆಶಾಕಿರಣವಾಗಿ ನಿಂತು ಭರವಸೆ ಮೂಡಿಸುತ್ತಾರೆ. ಪ್ರಾಣಿ, ಪಕ್ಷಿಗಳು ಪ್ರಕೃತಿದತ್ತವಾಗಿ ಬದುಕುವ ಕಲೆಯನ್ನು ರೂಢಿಸಿಕೊಂಡಿರುತ್ತವೆಯಾದರೂ ಮನುಷ್ಯನ ಹಸ್ತಕ್ಷೇಪದಿಂದ ಅವುಗಳ ಬದುಕು ಕೊಂಡಿ ತಪ್ಪಿದ ಸರಪಳಿಯಂತಾಗಿ ಬಿಡುತ್ತದೆ. ಎಷ್ಟೋ ಜನ ಇಂತಹ ಪ್ರಮಾದವೆಸಗಿದ್ದು ಅರಿವಿಗೆ ಬಂದ ನಂತರವೂ ನಿರ್ಲಕ್ಷಿಸಿ ಮುಂದೆ ಸಾಗುವುದರಿಂದ ಮೂಕ ಜೀವಿಗಳು ಯಾತನೆ ಅನುಭವಿಸಿ ದುರಂತ ಅಂತ್ಯ ಕಾಣುತ್ತವೆ. ಆದರೆ, ಅಮೆರಿಕಾದ ಮಿಶಿಗನ್ನಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡುತ್ತಿರುವ ಎರಿಕ್ ಸಿ ಮಾರ್ಟಿನ್, ಇದಕ್ಕೆ ಅಪವಾದವೆಂಬಂತೆ ನಿಂತು ಅಪಘಾತದಲ್ಲಿ ಸತ್ತ ಆಮೆಯೊಂದರ ಮೊಟ್ಟೆಗಳಿಗೆ ಕಾವು ನೀಡಿ ಅವುಗಳಿಗೆ ಜೀವ ಕರುಣಿಸಿದ್ದಾರೆ.
ಎರಿಕ್ ಸಿ ಮಾರ್ಟಿನ್ ಒಮ್ಮೆ ರಸ್ತೆಯಲ್ಲಿ ಸಾಗುತ್ತಿದ್ದಾಗ ಆಮೆಯೊಂದು ಮೃತಪಟ್ಟಿರುವುದು ಅವರ ಗಮನಕ್ಕೆ ಬಂದಿದೆ. ಅಪಘಾತದಿಂದ ಆಮೆ ಸತ್ತುಬಿದ್ದಿದ್ದು, ಅದರ ಹತ್ತಿರಕ್ಕೆ ಹೋದಾಗ ಬಿಳಿಯ ವಸ್ತುಗಳು ಕಂಡಿವೆ. ಗಮನವಿಟ್ಟು ಪರಿಶೀಲಿಸಿದಾಗ ಅದು ಆಮೆಯ ಮೊಟ್ಟೆಗಳೆಂದು ತಿಳಿದುಬಂದಿದೆ. ತಾಯ್ತನದ ಹೊಸ್ತಿಲಿನಲ್ಲಿ ಇದ್ದ ಆಮೆ ಅಪಘಾತದಲ್ಲಿ ಸತ್ತಾಗ ಅದರ ಮೊಟ್ಟೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ತಕ್ಷಣವೇ ಎರಿಕ್ ಸಿ ಮಾರ್ಟಿನ್ ಅಲ್ಲಿದ್ದ ಏಳು ಮೊಟ್ಟೆಗಳನ್ನೂ ಜೋಪಾನವಾಗಿ ಎತ್ತಿಟ್ಟುಕೊಂಡು ಮನೆಗೆ ತೆಗೆದುಕೊಂಡು ಹೋಗಿ ಮರಿ ಮಾಡಿದ್ದಾರೆ. ಕಣ್ಬಿಡುವ ಮೊದಲೇ ತಾಯಿಯನ್ನು ಕಳೆದುಕೊಂಡ ಆಮೆ ಮರಿಗಳಿಗೆ ಅವರೇ ಜನ್ಮದಾತರಾಗಿದ್ದಾರೆ. ಹೃದಯ ಮಿಡಿಯುವ ಈ ಘಟನೆಯನ್ನು ಸಂಪೂರ್ಣ ತಿಳಿಯಲು ಮೇಲಿರುವ ಸುಂದರವಾದ ವಿಡಿಯೋ ನೋಡಿ.