ರಾಯಚೂರು ಕಿಲ್ಲೇರಮಠದ ಶ್ರೀ ಶಿವಾಚಾರ್ಯ ಸ್ವಾಮೀಜಿಗಳು ಕನ್ನಡಿಗರಿಗೆ ಆರ್ ಸಿ ಬಿ ತಂಡದ ಮೇಲಿರುವ ಅಭಿಮಾನವನ್ನು ಕೊಂಡಾಡಿದರು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 23, 2022 | 5:31 PM

ನಿಮ್ಮ ಶುಭ ಹಾರೈಕೆಯಿಂದಲೇ ತಂಡ ಪ್ಲೇಆಫ್ ಹಂತ ತಲುಪಿದೆ. ಟೀಮಿನ ಪ್ರತಿಯೊಬ್ಬ ಆಟಗಾರನನ್ನು ನೀವು ಪ್ರೋತ್ಸಾಹಿಸುತ್ತೀರಿ, ಅಂತ ಸ್ವಾಮೀಜಿ ಹೇಳಿದಾಗ ನೆರದಿದ್ದ ಜನ ಖುಷಿಯಿಂದ ಕೂಗುತ್ತಾ ಕೇಕೆ ಮತ್ತು ಶಿಳ್ಳೆ ಹಾಕಿದರು.

ರಾಯಚೂರು:  ಇಂಡಿಯನ್ ಪ್ರಿಮೀಯರ್ ಲೀಗ್ 15 ನೇ ಸೀಸನ್ ಪ್ಲೇ-ಆಫ್ (Play-Off) ಹಂತ ತಲುಪಿದೆ. ಲೀಗ್ ಹಂತದಲ್ಲಿ ಉತ್ಕೃಷ್ಟ ಪ್ರದರ್ಶನ ನೀಡಿದ ನಾಲ್ಕು ತಂಡಗಳು-ಗುಜರಾಥ್ ಟೈಟನ್ಸ್, ರಾಜಸ್ತಾನ ರಾಯಲ್ಸ್, ಲಖನೌ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳು ಪ್ಲೇ-ಆಫ್ ಹಂತದಲ್ಲಿ ಆಡಲು ಅರ್ಹತೆ ಪಡೆದಿವೆ. ಕನ್ನಡಿಗರಿಗೆ ಚೆನ್ನಾಗಿ ಗೊತ್ತಿದೆ. ಪ್ರತಿಬಾರಿ ಐಪಿಎಲ್ ಸೀಸನ್ ಶುರುವಾದಾಗ ರಾಜ್ಯದೆಲ್ಲೆಡೆ ಬೆಂಗಳೂರಿನ ರಾಯಲ್ ಚಾಲೆಂಜರ್ಸ್ ಟೀಮಿಗೆ ಬೆಂಬಲ ಶುರುವಾಗಿ ಈ ಸಲ ಕಪ್ ನಮ್ದೇ ಎಂಬ ಕಹಳೆ ಮೊಳಗಲಾರಂಭಿಸುತ್ತದೆ. ನಮ್ಮ ನಾಡಿನ ಮಠಾಧೀಶರು ಕೂಡ ಕನ್ನಡಿಗರಿಗೆ ಆರ್ ಸಿ ಬಿ ತಂಡದ ಮೇಲಿರುವ ಅಭಿಮಾನ ಮತ್ತು ವ್ಯಾಮೋಹವನ್ನು ಗಮನಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿಯೆಂದರೆ ರಾಯಚೂರಿನ ಕಿಲ್ಲೇರಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿಗಳು (Sri Shantamalla Shivacharya Swamiji).

ರಾಯಚೂರಿನಲ್ಲಿ ನಾಟಕವೊಂದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸ್ವಾಮೀಜಿಗಳು ಅಭಿಮಾನಿಗಳಿಗೆ ಆರ್ ಸಿ ಬಿ ಮೇಲಿರುವ ಪ್ರೀತಿಯನ್ನು ಮುಕ್ತವಾಗಿ ಕೊಂಡಾಡಿದರು. ಬೆಂಗಳೂರಿನ ತಂಡ ಸೋಲಲಿ ಇಲ್ಲವೇ ಗೆಲ್ಲಲಿ, ನೀವು ಅದನ್ನು ಹುರಿದುಂಬಿಸುವುದು ಮಾತ್ರ ಬಿಡಲ್ಲ, ಈ ಸಲ ಕಪ್ ನಮ್ದೇ, ಈ ಸಲ ಕಪ್ ನಮ್ದೇ ಅನ್ನುತ್ತೀರಿ. ನಿಮ್ಮ ಶುಭ ಹಾರೈಕೆಯಿಂದಲೇ ತಂಡ ಪ್ಲೇಆಫ್ ಹಂತ ತಲುಪಿದೆ. ಟೀಮಿನ ಪ್ರತಿಯೊಬ್ಬ ಆಟಗಾರನನ್ನು ನೀವು ಪ್ರೋತ್ಸಾಹಿಸುತ್ತೀರಿ, ಅಂತ ಸ್ವಾಮೀಜಿ ಹೇಳಿದಾಗ ನೆರದಿದ್ದ ಜನ ಖುಷಿಯಿಂದ ಕೂಗುತ್ತಾ ಕೇಕೆ ಮತ್ತು ಶಿಳ್ಳೆ ಹಾಕಿದರು.

ಇದೇ ಸಂದರ್ಭದಲ್ಲಿ ಸ್ವಾಮೀಜಿಗಳು ನಾಟಕ ಕಲೆಯ ಒಂದು ಭಾಗವಾಗಿದೆ. ಆದರೆ ಅದರ ಜನಪ್ರಿಯತೆ ನಶಿಸುತ್ತಿದೆ. ಜನ ಕ್ರಮೇಣವಾಗಿ ನಾಟಕಗಳಿಂದ, ರಂಗಭೂಮಿಯಿಂದ ದೂರವಾಗುತ್ತಿದ್ದಾರೆ. ಕ್ರಿಕೆಟ್ ಬಗ್ಗೆ ಇರುವ ವ್ಯಾಮೋಹ, ಪ್ರೀತಿ ಮತ್ತು ಅಭಿಮಾನವನ್ನು ನಾಟಕಗಳ ಬಗ್ಗೆಯೂ ಬೆಳೆಸಿಕೊಳ್ಳುವಂತೆ ಜನರಿಗೆ ಕರೆ ನೀಡಿದರು.

ಇದನ್ನೂ ಓದಿ:   RCB: ಎಲಿಮಿನೇಟರ್ ಪಂದ್ಯದಲ್ಲಿ ಆರ್​ಸಿಬಿ ಎದುರಾಳಿ ಯಾರು?, ಪಂದ್ಯ ಯಾವಾಗ?, ಎಲ್ಲಿ: ಇಲ್ಲಿದೆ ಮಾಹಿತಿ