ಭೀಕರ ಬರಕ್ಕೆ ತುತ್ತಾದ ರಾಯಚೂರು, ಲಿಂಗಸೂರಿನಲ್ಲಿ ಗುಳೆ ಹೊರಟ 40 ಸಾವಿರ ಜನ

Edited By:

Updated on: Jul 28, 2026 | 9:08 AM

ರಾಯಚೂರು ಜಿಲ್ಲೆಯಲ್ಲಿ ಭೀಕರ ಬರಗಾಲದಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂಗಾರು ಮಳೆ ಕೈಕೊಟ್ಟು ಬೆಳೆಗಳು ಒಣಗಿ ಹೋಗಿವೆ. ಸಾಲಬಾಧೆಯಿಂದ ಜನರು ಲಿಂಗಸೂರು ಸೇರಿದಂತೆ ಹಲವೆಡೆಗಳಿಂದ ಗುಳೆ ಹೊರಟಿದ್ದಾರೆ. ಬರಪೀಡಿತ ಪ್ರದೇಶವೆಂದು ಘೋಷಿಸಿ ಸಾಲಮನ್ನಾ, ಪರಿಹಾರ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ರೈತರು ಹಾಗೂ ಶಾಸಕ ಮಾನಪ್ಪ ವಜ್ಜಲ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ರಾಯಚೂರು, ಜುಲೈ 28: ರಾಯಚೂರು ಜಿಲ್ಲೆಯಲ್ಲಿ ಭೀಕರ ಬರಗಾಲದ ಕರಿಛಾಯೆ ಆವರಿಸಿದ್ದು, ರೈತರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಮುಂಗಾರು ಮಳೆ ಕೈಕೊಟ್ಟ ಕಾರಣ, ಸಾಲಸೋಲ ಮಾಡಿ ಬಿತ್ತನೆ ಮಾಡಿದ್ದ ತೊಗರಿ, ಹತ್ತಿ ಸೇರಿದಂತೆ ಬಹುತೇಕ ಬೆಳೆಗಳು ಒಣಗಿ ಹೋಗಿವೆ. ಮಳೆಯ ಕೊರತೆಯ ಜೊತೆಗೆ ಕಾಲುವೆಗಳಲ್ಲಿ ನೀರಿನ ಲಭ್ಯತೆಯೂ ಇಲ್ಲದಿರುವುದು ರೈತರ ಬದುಕನ್ನು ಮತ್ತಷ್ಟು ದುಸ್ತರವಾಗಿಸಿದೆ. ಲಿಂಗಸೂರು ತಾಲ್ಲೂಕಿನ ಚತ್ತರ ಗ್ರಾಮದಂತಹ ಹಲವೆಡೆಗಳಲ್ಲಿ ಹೊಲಗಳು ಸಂಪೂರ್ಣವಾಗಿ ಬರಡಾಗಿವೆ. ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದ ರೈತರಿಗೆ ಈಗ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಈ ಪರಿಸ್ಥಿತಿಯಿಂದಾಗಿ ಜಿಲ್ಲೆಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ರಾಯಚೂರು ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸುವಂತೆ ಹಾಗೂ ರೈತರ ಸಾಲ ಮನ್ನಾ ಮಾಡುವಂತೆ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.

ಬಿಜೆಪಿ ಶಾಸಕ ಮಾನಪ್ಪ ವಜ್ಜಲ್ ಪ್ರಕಾರ, ಪ್ರತಿ ವರ್ಷ ರಾಯಚೂರು ಜಿಲ್ಲೆಯಿಂದ 60-65 ಸಾವಿರ ಜನರು ಗುಳೆ ಹೋಗುತ್ತಿದ್ದು, ಲಿಂಗಸೂರು ತಾಲ್ಲೂಕಿನಿಂದಲೇ ಈ ವರ್ಷ 40 ಸಾವಿರಕ್ಕೂ ಅಧಿಕ ಜನ ವಲಸೆ ಹೋಗುತ್ತಿದ್ದಾರೆ. ಈ ವರ್ಷದ ಬರಗಾಲವು ಕಳೆದ 10-15 ವರ್ಷಗಳಲ್ಲಿ ಕಂಡುಬರದಷ್ಟು ತೀವ್ರವಾಗಿದೆ. ಹಿಗಾಗಿ, ಗುಳೆ ಹೋಗುವವರ ಸಂಖ್ಯೆ ಇನ್ನೂ ಹೆಚ್ಚಾಗಬಹುದು. ಕೂಡಲೇ ಬರಗಾಲ ಘೋಷಣೆ, ಸಾಲಮನ್ನಾ, ಕೂಲಿ ಕೆಲಸ ಮತ್ತು ಕುಡಿಯುವ ನೀರಿನ ವ್ಯವಸ್ಥೆಗೆ ಅವರು ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us