ಶಾರುಖ್ ಖಾನ್​ಗೆ, ‘ನಿಮ್ಮೊಂದಿಗಿದ್ದೇವೆ’ ಅಂತ ಬೆಂಬಲ ಸೂಚಿಸುವುದು ಅಂದಾಭಿಮಾನದ ಪರಮಾವಧಿ!

ಶಾರುಖ್ ಖಾನ್​ಗೆ, ‘ನಿಮ್ಮೊಂದಿಗಿದ್ದೇವೆ’ ಅಂತ ಬೆಂಬಲ ಸೂಚಿಸುವುದು ಅಂದಾಭಿಮಾನದ ಪರಮಾವಧಿ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 07, 2021 | 9:17 PM

ಶಾರುಖ್ ಖಾನ್ ಒಬ್ಬ ಸೆಲಿಬ್ರಿಟಿ ಅನ್ನೋ ಅಂಶವನ್ನು ಪಕ್ಕಕ್ಕಿಟ್ಟು ಯೋಚನೆ ಮಾಡುವ ಅವಶ್ಯಕತೆಯಿದೆ. ಬೇರೆಯವರ ಮಕ್ಕಳೂ ಸಹ ಸಿಕ್ಕಿಬಿದ್ದಿದ್ದಾರೆ. ಅವರ ತಂದೆತಾಯಿಗಳಿಗೆ ಯಾರೂ ಬೆಂಬಲ ಸೂಚಿಸಿಲ್ಲ.

ನಮ್ಮ ದೇಶದಲ್ಲಿ ಅತಿರೇಕಗಳಿಗೆ ಬರವಿಲ್ಲ ಮಾರಾಯ್ರೇ. ಅಂದಾಭಿಮಾನ, ಹುಚ್ಚು ಅನುಕರಣೆಯಿಂದಾಗಿ ನಮ್ಮಂತೆಯೇ ಮಾನವರಾಗಿರುವ ನಟ-ನಟಿಯರು ಅತಿಮಾನವ ಮತ್ತು ದೇವಮಾನವ ಸ್ಟೇಟಸ್ ಪಡೆದುಕೊಳ್ಳುತ್ತಿದ್ದಾರೆ. ತಪ್ಪನ್ನು ತಪ್ಪು ಅಂತ ಹೇಳುವ ಬದಲು ಅದನ್ನು ಬೆಂಬಲಿಸುವ ಧಾರ್ಷ್ಟ್ಯತೆ ಮತ್ತು ಮಂಕುತನ ಕೇವಲ ನಮ್ಮ ದೇಶದಲ್ಲಿ ಮಾತ್ರ ಕಾಣಸಿಗುತ್ತದೆ. ಬಾಲಿವುಡ್ ನಟ ಶಾರುಖ್ ಖಾನ್ ಆವರ ಮಗ ಆರ್ಯನ್ ಖಾನ್ ಡ್ರಗ್ಸ್ ಕೇಸಿನಲ್ಲಿ ಸಿಕ್ಕು ಪೊಲೀಸರ ವಶದಲ್ಲಿದ್ದಾನೆ. ಅವನಿಗೆ ಅಂತರರಾಷ್ಟ್ರೀಯ ಡ್ರಗ್ ಪೆಡ್ಲರ್​​​ಗಳೊಂದಿಗೆ ಸಂಪರ್ಕ ಇರೋದು ಬೆಳಕಿಗೆ ಬಂದಿದೆ. ಡ್ರಗ್ಸ್ ಸೇವನೆ ಮತ್ತು ಮಾರಾಟ ನಮ್ಮ ದೇಶದಲ್ಲಿ ಅಪರಾಧ, ಇದು ಚಿಕ್ಕ ಮಕ್ಕಳಿಗೂ ಗೊತ್ತಿರುವ ವಿಷಯ. ಶಾರುಖ್ ಖಾನ್ ನಿಸ್ಸಂದೇಹವಾಗಿ ಭಾರತದ ಜನಪ್ರಿಯ ಮತ್ತು ಕೇವಲ ನಾಮಬಲದಿಂದ ಸಿನಿಮಾ ಓಡುವಂತೆ ಮಾಡುವ ಸಾಮರ್ಥ್ಯ ಇರುವ ಹಲವು ನಟರಲ್ಲಿ ಒಬ್ಬರು. ಅವರಿಗೆ ದೇಶದೆಲ್ಲೆಡೆ ಅಸಂಖ್ಯಾತ ಅಭಿಮಾನಿಗಳಿದ್ದಾರೆ.

ಅದೆಲ್ಲ ಸರಿ, ಆದರೆ ಅವರ ಈಗಿನ ಪರಿಸ್ಥಿತಿಯಲ್ಲಿ ಸಹಾನುಭೂತಿ ವ್ಯಕ್ತಪಡಿಸುವ ಭರದಲ್ಲಿ ಅಭಿಮಾನಿಗಳು ಅತಿರೇಕವನ್ನು ಪ್ರದರ್ಶಿಸುತ್ತಿದ್ದಾರೆ. ಮುಂಬೈಯಲ್ಲಿರುವ ಅವರ ಮನೆಯೆದುರು ಅಭಿಮಾನಿಗಳು ಹೆದರಬೇಡಿ, ನಾವು ನಿಮ್ಮೊಂದಿಗಿದ್ದೇವೆ ಅಂತ ಬರೆದಿರುವ ಪ್ಲಕಾರ್ಡ್​ಗಳೊಂದಿಗೆ ಜಮಾಗೊಳ್ಳುತ್ತಿದ್ದಾರೆ. ಇನ್ಸ್ಟಾಗ್ರಾಮ್, ಫೇಸ್​ಬುಕ್​ ಮತ್ತು ಟ್ವಿಟ್ಟರ್ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಖಾನ್ ಅಭಿಮಾನಿಗಳು, ನಿಮ್ಮೊಂದಿದ್ದೇವೆ ಹ್ಯಾಷ್ಟ್ಯಾಗ್ ನೊಂದಿಗೆ ಡಿಪಿಗಳನ್ನು ಹಾಕಿಕೊಳ್ಳುತ್ತಿದ್ದಾರೆ.

ಶಾರುಖ್ ಖಾನ್ ಒಬ್ಬ ಸೆಲಿಬ್ರಿಟಿ ಅನ್ನೋ ಅಂಶವನ್ನು ಪಕ್ಕಕ್ಕಿಟ್ಟು ಯೋಚನೆ ಮಾಡುವ ಅವಶ್ಯಕತೆಯಿದೆ. ಬೇರೆಯವರ ಮಕ್ಕಳೂ ಸಹ ಸಿಕ್ಕಿಬಿದ್ದಿದ್ದಾರೆ. ಅವರ ತಂದೆತಾಯಿಗಳಿಗೆ ಯಾರೂ ಬೆಂಬಲ ಸೂಚಿಸಿಲ್ಲ. ಖಾನ್ ಅವರ ಮಗ ಯಾವುದೋ ಘನಂದಾರಿ ಕೆಲಸ ಮಾಡಿಲ್ಲ, ಮಾದಕ ಪದಾರ್ಥ ಸೇವಿಸುವಾಗ ಸಿಕ್ಕಿಬಿದ್ದಿದ್ದಾನೆ. ಅದು ನಮ್ಮ ದೇಶದಲ್ಲಿ ಮಾತ್ರವಲ್ಲ ಎಲ್ಲ ದೇಶಗಳಲ್ಲೂ ಅಪರಾಧವೇ. ಕ್ರೀಡಾಪಟುಗಳು ತಮಗೆ ಗೊತ್ತಿಲ್ಲದೆ ನಿಷೇಧಿತ ಪದಾರ್ಥಗಳನ್ನು ಸೇವಿಸಿದಾಗ ಅವರನ್ನು ಜೀವಾವಧಿಗೆ ಬ್ಯಾನ್ ಮಾಡಲಾಗುತ್ತದೆ. ಆಗ ಯಾರೂ ಅವರ ಬೆಂಬಲಕ್ಕೆ ನಿಲ್ಲುವುದಿಲ್ಲ. ಇದು ದುರಂತವಲ್ಲದೆ ಮತ್ತೇನು?

ಅಭಿಮಾನ ಮತ್ತು ಅಂದಾಭಿಮಾನದ ನಡುವೆ ವ್ಯತ್ಯಾಸವಿದೆ. ಅಭಿಮಾನ ಸ್ವೀಕಾರ್ಹ, ಅಂದಾಭಿಮಾನ ಊಹುಂ.

ಇದನ್ನೂ ಓದಿ:  ಆರ್ಯನ್​ ಖಾನ್​ ಬಂಧನದಿಂದ ಸಂಕಷ್ಟಕ್ಕೆ ಸಿಲುಕಿದ ಶಾರುಖ್​ ಸಿನಿಮಾಗಳು; ಕೋಟ್ಯಂತರ ರೂಪಾಯಿ ನಷ್ಟ