ಲೈವ್‌ ಕಾಮೆಂಟರಿಯಲ್ಲಿ ಪಾಕ್ ಆಟಗಾರರ ಮಾನ ಕಳೆದ ವಾಸೀಂ ಅಕ್ರಮ್; ವಿಡಿಯೋ ನೋಡಿ

ಲೈವ್‌ ಕಾಮೆಂಟರಿಯಲ್ಲಿ ಪಾಕ್ ಆಟಗಾರರ ಮಾನ ಕಳೆದ ವಾಸೀಂ ಅಕ್ರಮ್; ವಿಡಿಯೋ ನೋಡಿ

ಪೃಥ್ವಿಶಂಕರ
|

Updated on: Nov 08, 2024 | 9:14 PM

Pakistan vs Australia ODI: ಪಾಕಿಸ್ತಾನವು ಆಸ್ಟ್ರೇಲಿಯಾವನ್ನು ಎರಡನೇ ಏಕದಿನ ಪಂದ್ಯದಲ್ಲಿ 9 ವಿಕೆಟ್‌ಗಳಿಂದ ಸೋಲಿಸಿತು. ಹ್ಯಾರಿಸ್ ರೌಫ್ ಅವರ ಅದ್ಭುತ ಬೌಲಿಂಗ್‌ನಿಂದ ಆಸ್ಟ್ರೇಲಿಯಾ ಕೇವಲ 163 ರನ್‌ಗಳಿಗೆ ಆಲೌಟ್ ಆಯಿತು. ಪಾಕಿಸ್ತಾನ ಸುಲಭವಾಗಿ ಗುರಿ ತಲುಪಿತು. ಆದರೆ, ಪಾಕಿಸ್ತಾನದ ಫೀಲ್ಡಿಂಗ್ ಕಳಪೆಯಾಗಿತ್ತು, ಶಾಹೀನ್ ಅಫ್ರಿದಿ ಕೂಡ ಸುಲಭ ಕ್ಯಾಚ್ ಕೈಚೆಲ್ಲಿದರು. ವಾಸಿಂ ಅಕ್ರಂ ಕೂಡ ತಂಡದ ಫೀಲ್ಡಿಂಗ್ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಅಡಿಲೇಡ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ಅದ್ಭುತ ಪ್ರದರ್ಶನ ನೀಡಿ ಆತಿಥೇಯ ಆಸ್ಟ್ರೇಲಿಯಾವನ್ನು 9 ವಿಕೆಟ್‌ಗಳಿಂದ ಸೋಲಿಸಿತು. ವೇಗಿ ಹ್ಯಾರಿಸ್ ರೌಫ್ ವೇಗದ ದಾಳಿಯ ಮುಂದೆ ಕಾಂಗರೂ ಬ್ಯಾಟ್ಸ್‌ಮನ್‌ಗಳು ಸುಲಭವಾಗಿ ಶರಣಾದರು. ಹೀಗಾಗಿ ಇಡೀ ತಂಡವು ಕೇವಲ 163 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು. ಈ ಗುರಿಯನ್ನು ಪಾಕಿಸ್ತಾನ ಕೇವಲ ಒಂದು ವಿಕೆಟ್ ಕಳೆದುಕೊಂಡು ಸಾಧಿಸಿತು. ಈ ಪಂದ್ಯದಲ್ಲಿ ಪಾಕಿಸ್ತಾನ ತಂಡದ ಬ್ಯಾಟಿಂಗ್ ಹಾಗೂ ಬೌಲಿಂಗ್ ಪ್ರದರ್ಶನ ಒಟ್ಟಾರೆಯಾಗಿ ಅದ್ಭುತವಾಗಿತ್ತು. ಆದರೆ ತಂಡದ ಕಳಪೆ ಫೀಲ್ಡಿಂಗ್ ಮತ್ತೊಮ್ಮೆ ಚರ್ಚೆಯ ವಿಷಯವಾಗಿದೆ. ಸುಲಭ ಕ್ಯಾಚ್​ಗಳನ್ನು ಕೈಚೆಲ್ಲುವುದನ್ನೇ ಖಯಾಲಿ ಮಾಡಿಕೊಂಡಿರುವ ಪಾಕ್ ಆಟಗಾರರು ಈ ಪಂದ್ಯದಲ್ಲೂ ಅದೇ ತಪ್ಪನ್ನು ಪುನರಾವರ್ತಿಸಿದ್ದಾರೆ.

ಆಸೀಸ್ ವಿರುದ್ಧದ ಈ ಪಂದ್ಯದಲ್ಲಿ ತನ್ನ ಮಾರಕ ಬೌಲಿಂಗ್ ಮೂಲಕ ಮೂರು ವಿಕೆಟ್ ಪಡೆದ ಶಾಹೀನ್ ಅಫ್ರಿದಿ, ಫೀಲ್ಡಿಂಗ್​ನಲ್ಲಿ ಮಾತ್ರ ತಮ್ಮ ಹಳೆಯ ವರಸೆಯನ್ನು ಮುಂದುವರೆಸಿದರು. ಬೌಂಡರಿ ಗೆರೆಯಲ್ಲಿ ಸುಲಭ ಕ್ಯಾಚ್ ಅನ್ನು ಕೈಚೆಲ್ಲಿದ ಅಫ್ರಿದಿ ಅವರ ಫೀಲ್ಡಿಂಗ್ ನೋಡಿದ ಪಾಕಿಸ್ತಾನದ ಮಾಜಿ ಬೌಲರ್ ವಾಸಿಂ ಅಕ್ರಂ ಕೂಡ ತನ್ನದೇ ತಂಡದ ಫೀಲ್ಡಿಂಗ್ ಬಗ್ಗೆ ವ್ಯಂಗ್ಯವಾಡಿದರು.

ಫೀಲ್ಡಿಂಗ್ ಬಗ್ಗೆ ಗೇಲಿ ಮಾಡಿದ ಅಕ್ರಮ್

ವಾಸ್ತವವಾಗಿ ಆಸ್ಟ್ರೇಲಿಯಾದ ಇನ್ನಿಂಗ್ಸ್‌ನಲ್ಲಿ ಮ್ಯಾಥ್ಯೂ ಶಾರ್ಟ್, ನಸೀಮ್ ಶಾ ಅವರ ಬಾಲ್‌ನಲ್ಲಿ ಶಾಟ್ ಆಡಿದರು. ಆದರೆ ಚೆಂಡನ್ನು ಸರಿಯಾಗಿ ಟೈಮ್ ಮಾಡಲು ಶಾರ್ಟ್​ಗೆ ಸಾಧ್ಯವಾಗಲಿಲ್ಲ. ಹೀಗಾಗಿ ಚೆಂಡು ನೇರವಾಗಿ ಶಾಹೀನ್ ಅಫ್ರಿದಿ ಅವರ ಕೈಗೆ ಹೋಯಿತು. ಆದರೆ, ಶಾರ್ಟ್ ಅವರ ಈ ಸುಲಭ ಕ್ಯಾಚ್ ಹಿಡಿಯಲು ಅಫ್ರಿದಿಗೆ ಸಾಧ್ಯವಾಗಲಿಲ್ಲ. ಅಫ್ರಿದಿ ಫೀಲ್ಡಿಂಗ್ ನೋಡಿ ವೀಕ್ಷಕ ವಿವರಣೆ ನೀಡುತ್ತಿದ್ದ ವಾಸಿಂ ಅಕ್ರಮ್ ಹಣೆ ಹಿಡಿದುಕೊಂಡರು. ಈ ವೇಳೆ ಮಾತನಾಡಿದ ಅಕ್ರಮ್, ‘ನಾವು ನಮ್ಮ ತಂಡದ ಫೀಲ್ಡರ್‌ಗಳನ್ನು ನಂಬಲು ಸಾಧ್ಯವಿಲ್ಲ. ತಂಡದ ಕಳಪೆ ಪ್ರದರ್ಶನಕ್ಕೆ ಹಲವು ಕಾರಣಗಳಲ್ಲಿ ಇದು ಕೂಡ ಒಂದು. ಪ್ರತಿ ಬಾರಿಯೂ ನಮ್ಮ ಫೀಲ್ಡರ್​ಗಳು ಕ್ಯಾಚನ್ನು ಕೈಚೆಲ್ಲಿದ್ದಾಗ ಕ್ಷಮಿಸಿ, ಚೆಂಡನ್ನು ನೋಡಲಿಲ್ಲ ಎಂದು ಹೇಳುವುದನ್ನು ಕೇಳಿ ಕೇಳಿ ಸಾಕಾಗಿದೆ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ