AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs WI: ದಿಗ್ಗಜರ ದಾಖಲೆ ಉಡೀಸ್, ನಾಯಕನಾಗಿ ಎಲೈಟ್ ಕ್ಲಬ್ ಸೇರಿದ ಶುಭ್​ಮನ್ ಗಿಲ್

IND vs WI: ದಿಗ್ಗಜರ ದಾಖಲೆ ಉಡೀಸ್, ನಾಯಕನಾಗಿ ಎಲೈಟ್ ಕ್ಲಬ್ ಸೇರಿದ ಶುಭ್​ಮನ್ ಗಿಲ್

ಪೃಥ್ವಿಶಂಕರ
|

Updated on: Oct 11, 2025 | 3:24 PM

Share

Shubman Gill's 10th Test Century: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಶುಭ್​ಮನ್ ಗಿಲ್ ತಮ್ಮ 10ನೇ ಶತಕ ಬಾರಿಸಿ ಹಲವು ದಾಖಲೆಗಳನ್ನು ಮುರಿದರು. ನಾಯಕನಾಗಿ ಐದನೇ ಶತಕ ಪೂರೈಸಿದ ಅವರು ಅಲಸ್ಟೈರ್ ಕುಕ್ ಮತ್ತು ಸುನಿಲ್ ಗವಾಸ್ಕರ್ ನಂತರ ಅತಿ ವೇಗವಾಗಿ ಈ ಸಾಧನೆ ಮಾಡಿದ ಮೂರನೇ ನಾಯಕರೆನಿಸಿಕೊಂಡರು. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ರಿಷಭ್ ಪಂತ್ ಮತ್ತು ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿ, ವಿರಾಟ್ ಕೊಹ್ಲಿ ಅವರ ಎಲೈಟ್ ಕ್ಲಬ್‌ಗೆ ಸೇರ್ಪಡೆಗೊಂಡ ಗಿಲ್, ತಮ್ಮ ಅಮೋಘ ಫಾರ್ಮ್ ಮುಂದುವರಿಸಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ತಮ್ಮ 10ನೇ ಟೆಸ್ಟ್ ಶತಕವನ್ನು ಬಾರಿಸಿರುವ ಭಾರತ ತಂಡದ ನಾಯಕ ಶುಭ್​ಮನ್ ಗಿಲ್ ಹಲವು ದಿಗ್ಗಜರ ದಾಖಲೆಗಳನ್ನು ಪುಡಿಗಟ್ಟಿದ್ದಾರೆ. 177 ಎಸೆತಗಳಲ್ಲಿ 100 ರನ್ ಪೂರೈಸಿದ ಗಿಲ್ ತಮ್ಮ ಇನ್ನಿಂಗ್ಸ್‌ನಲ್ಲಿ 13 ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರು. ನಾಯಕನಾಗಿ ಗಿಲ್ ಅವರ ಐದನೇ ಶತಕ ಇದಾಗಿದೆ. ಹಾಗೆಯೇ ಗಿಲ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ರಿಷಭ್ ಪಂತ್ ಅವರನ್ನು ಹಿಂದಿಕ್ಕಿದ್ದಾರೆ.

ಈ ಶತಕದೊಂದಿಗೆ ಅತಿ ಕಡಿಮೆ ಇನ್ನಿಂಗ್ಸ್‌ಗಳಲ್ಲಿ ಐದು ಶತಕಗಳನ್ನು ಬಾರಿಸಿದ ಮೂರನೇ ನಾಯಕ ಎಂಬ ಹೆಗ್ಗಳಿಕೆಗೂ ಗಿಲ್ ಪಾತ್ರರಾಗಿದ್ದಾರೆ. ಗಿಲ್ 12 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದರೆ, ಅಲಸ್ಟೈರ್ ಕುಕ್ ಒಂಬತ್ತು ಇನ್ನಿಂಗ್ಸ್‌ಗಳಲ್ಲಿ ನಾಯಕನಾಗಿ ಐದು ಶತಕಗಳನ್ನು ಬಾರಿಸಿದ್ದರು. ಹಾಗೆಯೇ ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ 10 ಇನ್ನಿಂಗ್ಸ್‌ಗಳಲ್ಲಿ ಐದು ಶತಕ ಪೂರೈಸಿದ್ದರು.

ಇದರ ಜೊತೆಗೆ ನಾಯಕನಾಗಿ 1,000 ರನ್‌ಗಳನ್ನು ಪೂರೈಸಿದ ಗಿಲ್, ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಗಿಲ್ ಅವರ ಹೆಸರಿನಲ್ಲಿ ಇದುವರೆಗೆ 10 ಶತಕಗಳು ದಾಖಲಾಗಿವೆ.

ಈ ಶತಕದೊಂದಿಗೆ ಗಿಲ್, ವಿರಾಟ್ ಕೊಹ್ಲಿ ಅವರ ಎಲೈಟ್ ಕ್ಲಬ್‌ಗೆ ಸೇರ್ಪಡೆಗೊಂಡಿದ್ದಾರೆ. ವಿರಾಟ್ ಕೊಹ್ಲಿ ಒಂದು ಕ್ಯಾಲೆಂಡರ್ ವರ್ಷದಲ್ಲಿ ನಾಯಕನಾಗಿ ಐದು ಟೆಸ್ಟ್ ಶತಕಗಳನ್ನು ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ. ಕೊಹ್ಲಿ 2017 ರಲ್ಲಿ ಮತ್ತು 2018 ರಲ್ಲಿ ಈ ಸಾಧನೆ ಮಾಡಿದ್ದರು. ಇದೀಗ ಗಿಲ್ ಕೂಡ ಒಂದು ಕ್ಯಾಲೆಂಡರ್ ವರ್ಷದಲ್ಲಿ ಐದು ಶತಕ ಸಿಡಿಸಿದ್ದಾರೆ. ಶುಭಮನ್ ಗಿಲ್ ತಮ್ಮ ಕೊನೆಯ 12 ಇನ್ನಿಂಗ್ಸ್‌ಗಳಲ್ಲಿ ಐದು ಶತಕಗಳನ್ನು ಬಾರಿಸಿರುವುದು ಅವರ ಅಮೋಘ ಫಾರ್ಮ್​ಗೆ ಹಿಡಿದ ಕೈಗನ್ನಡಿಯಾಗಿದೆ.