ನಿನ್ನ ಜೊತೆ ಮಾತಾಡುವುದಿದೆ, ದುಡುಕಬೇಡ ಅಂತ ಸಿದ್ದರಾಮಯ್ಯ ರಾಜೀನಾಮೆ ನೀಡಿರುವ ಇಬ್ರಾಹಿಂಗೆ ಹೇಳಿದರು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 14, 2022 | 4:06 PM

ಅಂದಹಾಗೆ, ಸೋಮವಾರ ಬೆಳಗ್ಗೆ ಇಬ್ರಾಹಿಂ ಮತ್ತು ಸಿದ್ದರಾಮಯ್ಯ ವಿಧಾನ ಸೌಧದ ಲಾಂಜ್ನಲ್ಲಿ ಮುಖಾಮುಖಿಯಾದರು. ಏಕವಚನದಲ್ಲಿ ಮಾತಾಡುವಷ್ಟು ಸಲುಗೆ ಅವರಲ್ಲಿದೆ.

ಬೆಂಗಳೂರು: ತಮ್ಮ ಹೆಸರಲ್ಲೇ ಸಿ ಎಮ್ ಇನಿಶಿಯಲ್ ಹೊಂದಿರುವ ಇಬ್ರಾಹಿಂ ಮತ್ತು ಕಾಂಗ್ರೆಸ್ (Congress) ನಡುವಿನ 14 ವರ್ಷದ ಸಖ್ಯ ಮುಗಿದಿದೆ. ಪಕ್ಷ ಬಿಡುತ್ತಿದ್ದೇನೆ ಅಂತ ಅವರು ಸುಮಾರು ಒಂದು ತಿಂಗಳು ಹಿಂದೆಯೇ ತಮ್ಮನ್ನು ತಾವು ಕಾಂಗ್ರೆಸ್ ನಿಂದ ಪ್ರತ್ಯೇಕಿಸಿಕೊಂಡಿದ್ದರೂ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿರಲಿಲ್ಲ. ಆದರೆ ಶನಿವಾರದಂದು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ (primary membership) ಹಾಗೂ ವಿಧಾನ ಪರಿಷತ್ ಸದಸ್ಯನ (MLC) ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ತಮ್ಮ ನಡೆ ಬಗ್ಗೆ ಪಕ್ಷದೊಳಗೆ ಸೃಷ್ಟಿಯಾಗಿದ್ದ ಗೊಂದಲಕ್ಕೆ ತೆರೆ ಎಳೆದರು. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಅವರು ಪುನಃ ಜೆಡಿಎಸ್ ಸೇರಲಿದ್ದಾರೆ. ನಿಮಗೆ ನೆನೆಪಿರಬಹುದು, 2008ರಲ್ಲಿ ಇಬ್ರಾಹಿಂ ಮತ್ತು ಸಿದ್ದರಾಮಯ್ಯ ಜೊತೆಯಾಗಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರು. ಅವರಿಬ್ಬರ ನಡುವಿನ ಸ್ನೇಹದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆದರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ನಂತರ ಸ್ನೇಹ ಹಳಸತೊಡಗಿತ್ತು ಅಂತ ಹೇಳಲಾಗುತ್ತದೆ.

ಅಂದಹಾಗೆ, ಸೋಮವಾರ ಬೆಳಗ್ಗೆ ಇಬ್ರಾಹಿಂ ಮತ್ತು ಸಿದ್ದರಾಮಯ್ಯ ವಿಧಾನ ಸೌಧದ ಲಾಂಜ್ನಲ್ಲಿ ಮುಖಾಮುಖಿಯಾದರು. ಏಕವಚನದಲ್ಲಿ ಮಾತಾಡುವಷ್ಟು ಸಲುಗೆ ಅವರಲ್ಲಿದೆ. ಇಬ್ರಾಹಿ ಕಂಡಾಕ್ಷಣ ಸಿದ್ದರಾಮಯ್ಯ, ‘ಯಾಕಯ್ಯ ಅಷ್ಟು ಅವಸರದಲ್ಲಿ ರಾಜೀನಾಮೆ ಸಲ್ಲಿಸಿದೆ, ನಾನು ಮಾರ್ಚ್ 31 ರಂದು ನಿನ್ನ ಮನೆಗೆ ಬಂದು ಮಾತಾಡ್ತೀನಿ ಅಂತ ಪಾಷಾ ಕೈಲಿ ಹೇಳಿ ಕಳಿಸಿದ್ದೆನಲ್ಲ, ಅವನು ನಿಂಗೆ ಹೇಳ್ಲಿಲ್ವಾ,’ ಅಂತ ಗದರುವ ಧ್ವನಿಯಲ್ಲಿ ಹೇಳುತ್ತಾರೆ.

ಅದಕ್ಕೆ ಇಬ್ರಾಹಿಂ, ಕಂಡಿದ್ದೀನಿ ಹೋಗಯ್ಯ ಅಂತ ಹೇಳುವುದನ್ನು ಅವರ ಹಾವಭಾವದಿಂದ ಅರ್ಥಮಾಡಿಕೊಳ್ಳಬಹುದು. ಆದರೂ ಸಿದ್ದರಾಮಯ್ಯ ಮಾತು ಮುಂದುವರಿಸಿ, ಆತುರ ಪಡಬೇಡ, ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡ ಅಂತ ಮತ್ತೊಮ್ಮೆ ಹೇಳುತ್ತಾರೆ. ಆದರೆ ಇಬ್ರಾಹಿಂ ಸಾಹೇಬರು ಅವರ ಯಾವ ಮಾತನ್ನೂ ಕೇಳಲು ತಯಾರಿಲ್ಲ.

ಇದನ್ನೂ ಓದಿ:  ಸಾಲ ತೀರಿಸಲಿಲ್ಲ ಎಂದು ವ್ಯಕ್ತಿಯನ್ನು ನಗ್ನಗೊಳಿಸಿ ಹಲ್ಲೆ ನಡೆಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಫೋಸ್ಟ್ ಮಾಡಿದ ಕಿರಾತಕ